ನವದೆಹಲಿ, ಸೆ 30 (DaijiworldNews/SM): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಕುಟುಂಬಕ್ಕೆ ಎದುರಾಗಿರುವ ಸಂಕಷ್ಟ ನಿವಾರಣೆಯಾಗುವಂತೆ ಗೋಚರವಾಗುತ್ತಿಲ್ಲ. ಡಿಕೆ ಶಿವಕುಮಾರ್, ಅವರ ಪುತ್ರಿಯ ವಿಚಾರಣೆ ಬಳಿಕ ಇದೀಗ ಸಹೋದರ ಸಂಸದ ಡಿಕೆ ಸುರೇಶ್ ಅವರಿಗೂ ಇಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಡಿ.ಕೆ. ಶಿವಕುಮಾರ್ ಅವರ ದೆಹಲಿ ಫ್ಲ್ಯಾಟ್ನಲ್ಲಿ ದೊರೆತ ಹಣದಲ್ಲಿ ಅರ್ಧದಷ್ಟು ತಮ್ಮ ಹಣವೂ ಸೇರಿಕೊಂಡಿದೆ ಎಂದು ಸಂಸದ ಸುರೇಶ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಆದೇಶ ನೀಡಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಡಿಕೆಶಿ ಪುತ್ರಿ ಐಶ್ವರ್ಯಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಮತ್ತೊಂದೆಡೆ ಡಿಕೆಶಿ ಆಪ್ತರಾಗಿರುವ ಶಾಸಕಿ ಹೆಬ್ಬಾಳ್ಕರ್ ಅವರನ್ನು ಕೂಡ ವಿಚಾರಣೆ ನಡೆಸಿದೆ. ಇದೀಗ ಸಂಸದ ಡಿಕೆ ಸುರೇಶ್ ಸರದಿ ಬಂದಿದೆ.
ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರಿಗೆ ಸಾಲ ನೀಡಿದ್ದಾಗಿ ಲೋಕಸಭಾ ಚುನಾವಣೆಯ ಅಫಿಡವಿಟ್ನಲ್ಲಿ ಸುರೇಶ್ ತಿಳಿಸಿದ್ದರು. ತಂದೆ ಕೆಂಪೇಗೌಡ ಅವರ ಆಸ್ತಿಯನ್ನು ಡಿಕೆ ಸುರೇಶ್ ಅವರಿಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಸುರೇಶ್ ಅವರು ತಮ್ಮ ಬಳಿ 338 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಈ ಎಲ್ಲಾ ವಿಚಾರಗಳ ಕುರಿತಂತೆ ಸಮರ್ಪಕ ಮಾಹಿತಿ ಸಂಗ್ರಹಿಸಲು ಇಡಿ ಸಂಸದ ಸುರೇಶ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ.