ರಾಯಚೂರು, ಅ.01(Daijiworld News/SS): ಕೇಂದ್ರ ಸರ್ಕಾರವೂ ಆರ್ಥಿಕವಾಗಿ ದಿವಾಳಿಯಾಗಿದೆ ಮತ್ತು ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹಿಂದಿನ ಬಾಗಿಲಿನಿಂದ ಯಡಿಯೂರಪ್ಪ ಅವರು ಬಂದು ಅಧಿಕಾರ ಹಿಡಿದು ಕುಳಿತಿದ್ದಾರೆ. ಇದು ಮಾನಗೆಟ್ಟ ಸರ್ಕಾರ. ಇಂತ ಸರ್ಕಾರ ಇರಬೇಕೇನ್ರೀ..? ಬಿಜೆಪಿಗೆ ವೋಟು ಕೊಟ್ಟು ನಮಗೆ ಶಿಕ್ಷೇ ಕೊಟ್ಟೀರಾ, ಇನ್ನೊಮ್ಮೆ ನಮಗೆ ಶಿಕ್ಷೆ ಕೊಡಬೇಡ್ರೀ.. ಎಂದು ಮನವಿ ಮಾಡಿದ್ದಾರೆ.
ಬಿಜೆಪಿ ಹೈ ಕಮಾಂಡ್ ಯಡಿಯೂರಪ್ಪ ಅವರ ರೆಕ್ಕೆ ಪುಕ್ಕ ಕಟ್ ಮಾಡಿದ್ದಾರೆ. ಕೇಂದ್ರ ಸರ್ಕಾರವೂ ಆರ್ಥಿಕವಾಗಿ ದಿವಾಳಿಯಾಗಿದೆ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ದಿವಾಳಿಯಾಗಿದೆ. ಯಡಿಯೂರಪ್ಪ ಒಂದು ಬಾರಿ 3 ದಿನ ಇನ್ನೊಂದು ಬಾರಿ 9 ದಿನ ಮುಖ್ಯಮಂತ್ರಿಯಾಗಿದ್ದರು. ಯಾವ ಪುರುಷಾರ್ಥಕ್ಕೆ ಅವರು ಮುಖ್ಯಮಂತ್ರಿ ಆಗಬೇಕ್ರೀ ಎಂದು ದೂರಿದ್ದಾರೆ.
ಕರ್ನಾಟಕದಲ್ಲಿ ಹಿಂದೆಂದೂ ಕಂಡು ಕಾಣದಂತ ನೆರೆ ಆಗಿದೆ. ದಾಖಲೆ ಪ್ರಕಾರ 1914ರಲ್ಲಿ ದೊಡ್ಡ ಪ್ರವಾಹ ಬಂದಿತ್ತು. ಈ ವರ್ಷ ಎದುರಾಗಿರುವ ಪ್ರವಾಹದಿಂದ 8 ಲಕ್ಷ ಜನ ಬೀದಿ ಪಾಲಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. 80 ಜನ ಸಸಾವನ್ನಪ್ಪಿ, ಹತ್ತಾರು ಜನ ನಾಪತ್ತೆಯಾಗಿ, ಲಕ್ಷಾಂತರ ಮೂಕಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಮೋದಿಯವರೇ ಕರ್ನಾಟಕದ ಜನರನ್ನ ನಿರ್ಲಕ್ಷ್ಯ ಮಾಡಿದ ನಿಮಗೆ ಜನರ ಶಾಪ ತಟ್ಟದೇ ಇರಲ್ಲ ಎಂದು ಹೇಳಿದ್ದಾರೆ.