ಬೆಂಗಳೂರು, ಅ 1 (Daijiworld News/RD): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರೀ ಪೈಪೋಟಿ ನಡೆಯುತ್ತಿದ್ದು, ಬಿಜೆಪಿಯಿಂದ ಮೇಯರ್ ಅರ್ಭ್ಯಥಿಯನ್ನಾಗಿ ಗೌತಮ್ ಕುಮಾರ್ ಜೈನ್ ಅವರ ಹೆಸರನ್ನು ನಳೀನ್ ಕುಮಾರ್ ಕಟೀಲ್ ಹಾಗೂ ಸಂಘ ಪರಿವಾರದ ಮುಖಂಡರು ಅಂತಿಮಗೊಳಿಸಿದ್ದಾರೆ.
ಪಕ್ಷ ಸಂಘ ನಿಷ್ಠೆ ಹೊಂದಿದವರಿಗೆ ಮೇಯರ್ ಪಟ್ಟ ನೀಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಗೌತಮ್ ಕುಮಾರ್ ಹೆಸರನ್ನು ಅಂತಿಮಗೊಳಿಸಲಾಗಿದೆ. ಸರ್ಕಾರ ಬಿಬಿಎಂಪಿ ಮೇಯರ್ ಚುನಾವಣೆಯನ್ನು ಮುಂದೂಡಲು ಪ್ರಯತ್ನ ನಡೆಸಿತ್ತು. ಆದರೆ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ ಇಂದೇ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಹೀಗಾಗಿ ಸೋಮವಾರ ರಾತ್ರಿ ಯಡಿಯೂರಪ್ಪ ಮೇಯರ್ ಚುನಾವಣೆ ಸಂಬಂಧ ಚರ್ಚೆ ನಡೆಸಲು ಬೆಂಗಳೂರಿಗೆ ಬರಬೇಕಿತ್ತು. ಆದರೆ ತಾನು ಸೂಚಿಸಿದ ವ್ಯಕ್ತಿಗಳಿಗೆ ಬೆಂಬಲ ಸಿಗುತ್ತಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಶಿಕಾರಿಪುರದಲ್ಲೇ ಇರಲು ನಿರ್ಧರಿಸಿದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಕಳೆದ 4 ವರ್ಷಗಳಿಂದ ವಿರೋಧ ಪಕ್ಷದ ನಾಯಕರಾಗಿದ್ದ ಪದ್ಮನಾಭ ರೆಡ್ಡಿ ಅಥವಾ ಎಲ್ ಶ್ರೀನಿವಾಸ್ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದರು. ಆದರೆ ಜೋಗುಪಾಳ್ಯದ ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಪರ ನಿಂತ ನಳೀನ್ ಕುಮಾರ್, ಅಂತಿಮವಾಗಿ ಹೈಕಮಾಂಡ್ ಗೌತಮ್ ಹೆಸರು ಆಯ್ಕೆ ಮಾಡಿದ್ದಾರೆ.