ಬೆಂಗಳೂರು, ಅ 1 (Daijiworld News/RD): ಪ್ರಧಾನಿ ನರೇಂದ್ರ ಮೋದಿಯವರು ಬಿಹಾರ ಪ್ರವಾಹ ಪರಿಸ್ಥಿತಿಯ ಕುರಿತಾಗಿ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಹಾರ ಪ್ರವಾಹದ ಬಗ್ಗೆ ಮಿಡಿದ ನಿಮ್ಮ 52 ಇಂಚಿನ ಎದೆ ಕರ್ನಾಟಕಕ್ಕೆ ಯಾಕೆ ಮಿಡಿಯುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ’ಬಿಹಾರ ಪ್ರವಾಹದ ಬಗ್ಗೆ ಮಿಡಿದ 52 ಇಂಚಿನ ಪ್ರಧಾನಿ ನರೇಂದ್ರ ಮೋದಿ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆ ಆಗಿದ್ದು ಯಾಕೆ? ಇದು 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ? ಇಲ್ಲ ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ದ್ವೇಷವೇ” ಎಂದು ಕೇಳಿದರು. ಜೊತೆಗೆ ನಮೋ ಮಿಸ್ಸಿಂಗ್ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
ಬಿಹಾರದ ಪ್ರವಾಹ ಪರಿಸ್ಥಿತಿಯ ಕುರಿತಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಳಿ ಮಾತನಾಡಿದ್ದೇನೆ. ಕೇಂದ್ರ ಸರಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದರು.