ನವದೆಹಲಿ, ಅ 1 (Daijiworld News/RD): ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಇಂದಾದರೂ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದು, ಅವರ ನಿರೀಕ್ಷೆಗೆ ವಿಶೇಷ ನ್ಯಾಯಾಲಯ ತಣ್ಣೀರೆರೆಚಿದೆ.
ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗೆ ಇಡಿ ಅಧಿಕಾರಿಗಳು ಇಂದು ಡಿಕೆ ಶಿವಕುಮಾರ್ ಅವರನ್ನು ಹಾಜರುಪಡಿಸಿದರು. ಈ ವೇಳೆ ಕೋರ್ಟ್ ವಾದ ಪ್ರತಿವಾದ ಆಲಿಸಿ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 15 ವರೆಗೆ ವಿಸ್ತರಿಸಿದೆ.
ಡಿಕೆಶಿ ಅವರಿಗೆ ಜಾಮೀನು ನೀಡುವ ಕುರಿತು, ಇಡಿ ಪರ ವಾದ ಮಂಡಿಸಿದ ವಕೀಲ ನಾಗರಾಜ್, "ನ್ಯಾಯಾಂಗ ಬಂಧನದ ವೇಳೆ ಡಿಕೆಶಿ ವಿಚಾರಣೆಗೆ ಸಹಕಾರ ನೀಡಿಲ್ಲ. ಅನಾರೋಗ್ಯದ ನೆಪವೊಡ್ಡಿ ಪದೇ ಪದೇ ಆಸ್ಪತ್ರೆ ಸೇರಿದ್ದರು. ಪರಿಣಾಮ ಸಂಪೂರ್ಣ ವಿಚಾರಣೆ ಸಾಧ್ಯವಾಗಿಲ್ಲ. ಹೀಗಾಗಿ ಅವರನ್ನು ಮತ್ತಷ್ಟು ದಿನ ನ್ಯಾಯಾಂಗ ಬಂಧನಕ್ಕೆ ಒಪಡಿಸಬೇಕು" ಎಂದು ಮನವಿ ಮಾಡಿಕೊಂಡರು.
ಆದರೆ ಇದಕ್ಕೆ ಪ್ರತಿವಾದ ಸಲ್ಲಿಸಿದ ಡಿಕೆಶಿ ಪರ ವಕೀಲರು, "ಡಿಕೆಶಿ ಎಲ್ಲಾ ವಿಚಾರಣೆಗೂ ಸಹಕರಿಸಿದ್ದಾರೆ. ಯಾವುದೇ ವಿಚಾರಣೆ ಸಿದ್ದರಿದ್ದಾರೆ. ಅಧಿಕಾರಿಗಳು ದಿನಕ್ಕೆ 3 ರಿಂದ 4 ಗಂಟೆ ವಿಚಾರಣೆ ನಡೆಸಲಿ. ಆದರೆ, ಅವರಿಗೆ ನ್ಯಾಯಾಂಗ ಬಂಧನದ ಸಂದರ್ಭದಲ್ಲಿ ಕುಟುಂಬಸ್ಥರ ಹಾಗೂ ವಕೀಲರ ಭೇಟಿಗೆ ಅವಕಾಶ ಮಾಡಿಕೊಡಿ. ಜೈಲಿನಲ್ಲಿ ಓದಲು ಪುಸ್ತಕ ಕೊಡಿ" ಎಂದು ಮನವಿ ಮಾಡಿಕೊಂಡರು.
ಬಂಧನದ ವೇಳೆ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಿರುವ ನ್ಯಾಯಾಲಯ, ಮುಂದಿನ ಎರಡು ವಾರಗಳ ಕಾಲ ಡಿಕೆಶಿ ಜೈಲಿನಲ್ಲೇ ಕಳೆಯುವಂತಹ ತೀರ್ಪು ನೀಡಿದೆ.