ನವದೆಹಲಿ, ಅ 01 (DaijiworldNews/SM): ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಿ ಬರುತ್ತೇನೆ. ಬಳಿಕ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರ ಬಂಡವಾಳವನ್ನು ಬಯಲು ಮಾಡುತ್ತೇನೆ ಎಂದು ಮಾಜಿ ಸಚಿವ ಸದ್ಯ ತಿಹಾರ ಜೈಲಿನಲ್ಲಿರುವ ಡಿ.ಕೆ. ಶಿವಕುಮಾರ್ ಬಿಜೆಪಿ ಮುಖಂಡರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಇಡಿ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮಂಗಳವಾರದಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಆದರೆ, ಬಿಡುಗಡೆ ಭಾಗ್ಯದಿಂದ ಅವರು ವಂಚಿತರಾಗಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅಜಯ್ ಕುಮಾರ್ ಅವರು ಡಿಕೆ ಶಿವಕುಮಾರ್ ಅವರ ಇಡಿ ನ್ಯಾಯಾಂಗ ಬಂಧವನ್ನು ವಿಸ್ತರಿಸಿದ್ದಾರೆ. ಹೀಗಾಗಿ ಮುಂದಿನ ಅಕ್ಟೋಬರ್ 14ರ ವರೆಗೆ ಡಿಕೆಶಿ ತಿಹಾರ್ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದು 20 ಲಕ್ಷಕ್ಕೆ ರಾಚೇನಹಳ್ಳಿಯಲ್ಲಿ ಕೊಂಡ ಆಸ್ತಿಯನ್ನು ಯಡಿಯೂರಪ್ಪ ಜಿಂದಾಲ್ ಕಂಪೆನಿಗೆ 40 ಕೋಟಿಗೆ ಮಾರಿದ್ದರು. ನಾನೊಬ್ಬನೇ ತಪ್ಪು ಮಾಡಿದ್ದೇನಾ? ನಾನು ಮತ್ತು ನನ್ನ ಮಗಳ ಆಸ್ತಿ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರದು ಯಾವುದೇ ಅಕ್ರಮಗಳ ಬಗ್ಗೆ ಮಾತನಾಡುತ್ತಿಲ್ಲ. ಜೈಲಿನಿಂದ ಹೊರ ಬಂದಾಕ್ಷಣ ಎಲ್ಲದಕ್ಕೂ ನಾನು ಉತ್ತರ ನೀಡುತ್ತೇನೆ ಎಂದು ಡಿಕೆಶಿವಕುಮಾರ್ ಆಕ್ರೋಶ ವ್ಯಕ್ರಪಡಿಸಿದ್ದಾರೆ.