ಬೆಂಗಳೂರು, ಅ 2 (Daijiworld News/RD): ಮಹಾತ್ಮ ಗಾಂಧೀ ಜಯಂತಿ ಪ್ರಯುಕ್ತ ಇಂದಿನಿಂದ ದೇಶಾದ್ಯಂತ ಪ್ಲಾಸ್ಟಿಕ್ ಬ್ಯಾನ್ ಆಗಿದೆ. ಇನ್ನು ಮುಂದೆ ಬಸ್ಸು, ರೈಲ್ವೇ ಸ್ಟೇಷನ್ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಜನರು ಪ್ಲಾಸ್ಟಿಕ್ ಬಳಸುತ್ತಿರುವುದನ್ನು ಕಂಡರೆ ಅವರಿಗೆ ದಂಡ ವಿಧಿಸಲಾಗುತ್ತದೆ.
ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ಅನ್ನು ಮಿತಿಮೀರಿ ಬಳಸುತ್ತಿದ್ದು, ಇದಕ್ಕಾಗಿ ಅನೇಕ ಕಾನೂನಾತ್ಮಕ ಕ್ರಮ ಕೈಗೊಂಡರೂ ಕೂಡ ದೇಶದ ಉದ್ದಗಲ್ಲಕ್ಕೂ ಪ್ಲಾಸ್ಟಿಕ್ ನ್ನು ಎಗ್ಗಿಲ್ಲದೆ ಬಳಸುತ್ತಿರುವುದನ್ನು ಕಾಣಬಹುದು.
ರಾಜ್ಯದ ರಾಜಧಾನಿಯಾದ ಬೆಂಗಳೂರು ಗಾರ್ಬೆಜ್ ಸಿಟಿಯಾಗಿದ್ದು, ಎಲ್ಲೆಡೆ ಕಸದ ಸಮಸ್ಯೆಯೇ ಎದ್ದು ಕಾಣುತ್ತಿದೆ. ಇತ್ತ ಇಂದಿನಿಂದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿಯೂ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಸಿದರೆ ಒಂದು ಸಾವಿರ ರೂ. ಫೈನ್ ಹಾಕಲಾಗುವುದು ಎಂದು ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ ಕುಮಾರ್ ವರ್ಮ ಅವರು ಆದೇಶಿಸಿದ್ದಾರೆ.
2016ರಿಂದಲೇ ಬಿಬಿಎಂಪಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು, ಕಳೆದ ಒಂದು ವರ್ಷದಲ್ಲಿ, ಪ್ಲಾಸ್ಟಿಕ್ ಬಳಕೆಗೆ 86 ಲಕ್ಷ ರೂ. ಫೈನ್ ಹಾಕಲಾಗಿತ್ತು.
ಈ ನಿಟ್ಟಿನಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಗಾಂಧೀಯ ಆದರ್ಶದಂತೆ, ಪ್ರಧಾನಿ ನರೇಂದ್ರ ಮೋದಿಯವರು, ಸ್ವಚ್ಛ ಭಾರತಕ್ಕೆ ಹೆಚ್ಚು ಮಹತ್ವ ಕೊಟ್ಟು, ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿಸುವ ಉದ್ದೇಶದಿಂದಾಗಿ ಇಂದಿನಿಂದ ದೇಶಾದ್ಯಂತ ಮರು ಬಳಕೆಯಾದ ಪ್ಲಾಸ್ಟಿಕ್ ನಿಷೇಧಿಸುವಂತೆ ಆದೇಶ ಹೊರಡಿಸಲಾಗಿದೆ.