ಮೈಸೂರು, ಅ 2 (Daijiworld News/RD): ಕೇಂದ್ರ ಸರ್ಕಾರ ನೆರೆಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ತೋರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ. ಯಾವ ರಾಜ್ಯಕ್ಕೂ ಪ್ರಧಾನಿ ಮೋದಿ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಮಾದ್ಯಮದ ಜೊತೆ ಮಾತನಾಡಿದ ಅವರು, ಒಂದು ವಿಷಯವನ್ನು ಎಲ್ಲರು ತಿಳಿದುಕೊಳ್ಳಬೇಕು. ಕೇಂದ್ರ ಸರ್ಕಾರ ಪರಿಹಾರ ಕೊಡುವುದಿಲ್ಲ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ರೈತರಿಗೆ ಕೃಷಿ ಚಟುವಟಿಕೆ ತೊಂದರೆಯಾದರೆ ಮೊದಲಿನಿಂದ ಶುರು ಮಾಡುವುದಕ್ಕೆ ಕೊಡುವ ಸಹಾಯಧನವೇ ಹೊರತು ಪರಿಹಾರ ಅಲ್ಲ. ದೇಶಾದ್ಯಂತ ನೆರೆ ಬಂದಾಗ ಯಾವ ಸರ್ಕಾರ ಕೂಡ ಪರಿಹಾರ ಕೊಡುವುದಿಲ್ಲ. ಅವರು ಕೊಡುವುದು ಸಹಾಯಧನ. ಮೋದಿ ಅವರು ಕರ್ನಾಟಕದ ಮೇಲೆ ಬಹಳ ಪ್ರೀತಿ ಇಟ್ಟುಕೊಂಡು ಏನೇನು ಅನುದಾನ ಕೊಡಬೇಕಿತ್ತೋ ಆ ಅನುದಾನವನ್ನು ಕೊಟ್ಟಿದ್ದಾರೆ. ಎನ್ಡಿಆರ್ಎಫ್ ತಂಡ ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ಅದಕ್ಕೆ ತಂಡ ಬಂದು ಪರಿಶೀಲನೆ ಮಾಡಿಕೊಂಡು ಹೋಗಿದೆ. ಪರಿಹಾರ ಎಂದಾಕ್ಷಣ ಯಾರೂ ಕಿಸೆಯಿಂದ ಪರಿಹಾರ ಕೊಡುವುದಲ್ಲ. ಅದಕ್ಕೆ ಅಂತಾನೇ ತುಂಬಾ ಪ್ರಕ್ರಿಯೆಗಳು ಇರುತ್ತದೆ ಎಂದು ಹೇಳಿದರು.
ಈ ವೇಳೆ ಮೋದಿ ಬಿಹಾರಕ್ಕೆ ಪರಿಹಾರ ನೀಡಿರುವ ಕುರಿತು ಟ್ವೀಟ್ ವಿರೋಧ ವ್ಯಕ್ತಪಡಿಸಿದ ನಾಯಕರ ಬಗ್ಗೆ ಮಾತನಾಡಿದ ಅವರು, ಆದರೆ ಮೋದಿ ಅವರು ಕರ್ನಾಟಕಕ್ಕೆ ಅಮಿತ್ ಶಾ ಅವರನ್ನು ಕಳುಹಿಸಿಕೊಟ್ಟಿದ್ದರು ಅದು ನಿಮಗೆ ಕಣ್ಣಿಗೆ ಕಾಣಿಸುವುದಿಲ್ಲವಾ ಎಂದು ಖಾರವಾಗಿ ಹೇಳಿದರು.