ಮೈಸೂರು, ಅ 02 (Daijiworld News/MSP): ಬಿಹಾರ ಪ್ರವಾಹ ಪರಿಸ್ಥಿತಿ ಬಗ್ಗೆ ಅನುಕಂಪ ತೋರಿಸಿ, ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್ ವಿರುದ್ದ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ರಾಜ್ಯಕ್ಕೆ ಪ್ರವಾಹ ಪರಿಹಾರ ಬಿಡುಗಡೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚೆತ್ತುಕೊಂಡಿದ್ದು, ಇನ್ನು ಮೂರರಿಂದ ನಾಲ್ಕು ದಿನದೊಳಗೆ ಪರಿಹಾರ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ನೆರೆಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸಲಿದ್ದು, ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಕರ್ನಾಟಕ ಮಾತ್ರವಲ್ಲ ಕೇಂದ್ರ ಸರ್ಕಾರ ಪ್ರವಾಹ ಪೀಡಿತ ಯಾವ ರಾಜ್ಯಕ್ಕೂ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರನ್ನು ಎಂದೂ ಕಡೆಗಣಿಸಿಲ್ಲ ಆದರೆ ಈ ವಿಚಾರವಾಗಿ ಸುಖಾಸುಮ್ಮನೆ ವಿರೋಧ ಪಕ್ಷದ ನಾಯಕರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಅಗತ್ಯವಿಲ್ಲ. ನೆರೆ ಪೀಡಿತರಿಗೆ ಪರಿಹಾರ ನೀಡುವ ಕಾರ್ಯ ನಡೆದಿದೆ ಎಂದು ಯಡಿಯೂರಪ್ಪ ಹೇಳಿದರು.
ವಿದೇಶ ಪ್ರವಾಸದಿಂದ ಹಿಂತಿರುಗಿದ ಪ್ರಧಾನಿ ಮೋದಿ ಅವರಿಗೆ ಎಲ್ಲಾ ರಾಜ್ಯದ ಪ್ರವಾಹ ಹಾನಿ ಪರಿಸ್ಥಿತಿ ಬಗ್ಗೆ ತಿಳಿದಿದೆ, ಇನ್ನು ನಮ್ಮ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಎಲ್ಲವನ್ನೂ ಮನವರಿಕೆ ಮಾಡಿ ಬಂದಿದ್ದೇನೆ. ಹೀಗಾಗಿ ಇನ್ನೂ ಎರಡು-ಮೂರು ದಿನಗಳಲ್ಲಿ ಪರಿಹಾರ ಘೋಷಿಸುವ ನಿರೀಕ್ಷೆ ಇದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.