ಬೆಂಗಳೂರು, ಅ 02 (DaijiworldNews/SM): ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುವ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಸದ್ಭಾವನ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭ ರಾಷ್ಟ್ರಪಿತ ಗಾಂಧೀಜಿಯವರನ್ನು ಕೊಂಡಾಡಿದರು. ಮಹಾತ್ಮಾ ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ ಅವರೊಂದು ಸಿದ್ಧಾಂತ. ಮಹಾತ್ಮ ಗಾಂಧಿ ಹೇಳಿರುವ ರಾಮ ಹಾಗೂ ಬಿಜೆಪಿ ಹೇಳುವ ರಾಮನಿಗೂ ವ್ಯತ್ಯಾಸವಿದೆ ಎಂದರು. ಗಾಂಧೀಜಿ ದೇಶವನ್ನು ಒಗ್ಗೂಡಿಸಲು ರಾಮನ ನಾಮ ಬಳಸಿದ್ದರೆ, ಬಿಜೆಪಿ ದೇಶ ಒಡೆಯಲು ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪ್ರತಿಯೊಬ್ಬ ನಾಯಕರಿಗೆ ಮಹಾತ್ಮಗಾಂಧಿ ಗುರುವಾಗಿ ಕಾಣಿಸುತ್ತಾರೆ. ಆದರೆ, ಆಧುನಿಕ ಕಾಲ ಘಟ್ಟದ ಯುವಕರು ಗಾಂಧೀಜಿಯವರನ್ನು ಮರೆಯುತ್ತಿರುವುದು ಬೇಸರ ವಿಚಾರವಾಗಿದೆ ಎಂದರು.
ಇನ್ನು ಕೇಂದ್ರದ ಮೋದಿ ಸರಕಾರ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಇಬ್ಬರು ನಾಯಕರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ವಾಗ್ದಾಳಿ ನಡೆಸಿದರು. ಟ್ರಂಪ್ ಅವರು ಮೋದಿಯನ್ನು ರಾಷ್ಟ್ರಪಿತ ಎಂದು ಕರೆದು ಅವಿವೇಕತನ ಪ್ರದರ್ಶಿಸಿದ್ದಾರೆ ಎಂದರು. ಒಂದೊಮ್ಮೆ ಮೋದಿ ನಿಜವಾದ ದೇಶ ಭಕ್ತರೇ ಆಗಿದ್ದ್ದರೆ, ಟ್ರಂಪ್ ಹೇಳಿಕೆಯನ್ನು ನಿರಾಕರಿಸಬೇಕಿತ್ತು ಎಂದು ಸವಾಲೆಸೆದಿದ್ದಾರೆ.