ಶ್ರೀನಗರ, ಅ.03(Daijiworld News/SS): ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಗೃಹ ಬಂಧನದಲ್ಲಿದ್ದ ಜಮ್ಮು ವಲಯದ ರಾಜಕಾರಣಿಗಳನ್ನು ಬಿಡುಗಡೆ ಮಾಡಲಾಗಿದ್ದು, ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ ಕಾಶ್ಮೀರದ ರಾಜಕಾರಣಿಗಳಿಗೆ ವಿಧಿಸಲಾಗಿದ್ದ ನಿರ್ಬಂಧ ಮುಂದುವರಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ರಮಣ್ ಭಲ್ಲಾ, ಹರ್ಷದೇವ್ ಸಿಂಗ್, ಚೌಧರಿ ಲಾಲ್ಸಿಂಗ್, ವಿಕಾರ್ ರಸೂಲ್, ಜಾವೇದ್ ರಾಣಾ, ಸುರ್ಜಿತ್ ಸಿಂಗ್ ಸ್ಲಾಥಿಯಾ ಮತ್ತು ಸಜ್ಜದ್ ಅಹಮದ್ ಕಿಚ್ಲೂ ಇನ್ನಿತರರಿಗೆ ವಿಧಿಸಲಾಗಿದ್ದ ಗೃಹಬಂಧನವನ್ನೂ ತೆರವುಗೊಳಿಸಲಾಗಿದೆ. ಜಮ್ಮು- ಕಾಶ್ಮೀರದ ಪಂಚಾಯತ್ ರಾಜ್ ವ್ಯವಸ್ಥೆಯ ಎರಡನೇ ಹಂತವಾದ ಬ್ಲಾಕ್ ಅಭಿವೃದ್ಧಿ ಮಂಡಳಿಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಪ್ರಸ್ತುತ ಜಮ್ಮು ವಲಯ ಶಾಂತವಾಗಿರುವುದರಿಂದ ರಾಜಕಾರಣಿಗಳನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಅವರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಮತ್ತು ಫಾರೂಕ್ ಅಬ್ದುಲ್ಲಾ ಸಹಿತ ಸುಮಾರು 400 ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.