ಬೆಂಗಳೂರು, ಅ.03(Daijiworld News/SS): ಡಿ.ಕೆ.ಶಿವಕುಮಾರ್ ಅವರ ಅಕ್ರಮ ಹಣಕಾಸು ವ್ಯವಹಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಜಾರಿ ನಿರ್ದೇಶನಾಲಯ ಅಕ್ರಮ ಹಣಕಾಸು ವ್ಯವಹಾರ ಪ್ರಕರಣದ ತನಿಖೆ ನಡೆಸಲು ಸಿಬಿಐ ನೆರವನ್ನು ಕೋರಿತ್ತು. ಇಡಿ ಮನವಿಯನ್ನು ಪರಿಗಣಿಸಿದ ಸಿಬಿಐ, ತನಿಖೆ ನಡೆಸಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರಕ್ಕೆ ಬರೆದಿತ್ತು. ಸಿಬಿಐ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರದ ಗೃಹ ಇಲಾಖೆಯು ಮಾಜಿ ಸಚಿವರ ಮೇಲೆ ತನಿಖೆಗೆ ಅನುಮತಿಯನ್ನು ನೀಡಿದೆ. ಈ ಮೂಲಕ ಸಿಬಿಐ ಮೊದಲಿಗೆ ಪ್ರಾಥಮಿಕ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ್ ಅವರು ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಮಾಜಿ ಸಚಿವರ ನ್ಯಾಯಾಂಗ ಬಂಧನದ ಅಕ್ಟೋಬರ್ 1ರಂದು ಮುಕ್ತಾಯವಾಗಿತ್ತು. ಬಳಿಕ ಅವರನ್ನು (ಅ.1ರಂದು) ಕೋರ್ಟಿಗೆ ಕರೆತರಲಾಗಿತ್ತು. ಕೋರ್ಟಿನಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಅಕ್ಟೋಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ನೀಡಿದ್ದಾರೆ. ಅಕ್ಟೋಬರ್ 14ಕ್ಕೆ ದೆಹಲಿಯ ಹೈಕೊರ್ಟಿನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಗೆ ನಡೆಯಲಿದೆ.