ಬೆಂಗಳೂರು, ಅ 03 (DaijiworldNews/SM): ಪ್ರತಿ ನಿತ್ಯ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪರವಾಗಿದ್ದ ಚಕ್ರವರ್ತಿ ಸೂಲಿಬೆಲೆ ಅವರು ಕೇಂದ್ರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಇದೀಗ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ.
ಉತ್ತರ ಕರ್ನಾಟಕದ ನೆರೆ ಬಾಧಿತ ಪ್ರದೇಶಕ್ಕೆ ಕೇಂದ್ರ ಸರಕಾರದ ಪರಿಹಾರ ತರಲು ಸಂಸದರು ಹಾಗೂ ಕೇಂದ್ರ ಸಚಿವರು ವಿಫಲರಾಗಿದ್ದಾರೆ. ಈ ಹಿನ್ನೆಲೆ ಅವರನ್ನು ಸೂಲಿಬೆಲೆ ಪ್ರಶ್ನಿಸಿದ್ದರು. ಆದರೆ, ಈ ಕಾರಣಕ್ಕಾಗಿ ಬಿಜೆಪಿ ಪರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ದೇಶದ್ರೋಹಿ ಎಂಬ ಹಣೆಪಟ್ಟಿಕಟ್ಟಿದ್ದಾರೆ ಎನ್ನಲಾಗಿದೆ.
ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್ ಗೆ ಸಂಬಂಧಿಸಿದಂತೆ ಗರಂ ಆಗಿರುವ ಸದಾನಂದ ಗೌಡರು, ಸೂಲಿಬೆಲೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೇ ಭಾಷಣ ಮಾಡಿ ಚಪ್ಪಾಳೆಗಿಟ್ಟಿಸಿಕೊಂಡು ದೇಶ ಕಟ್ಟುತ್ತಿದ್ದೇನೆ ಎಂದು ಮಾತನಾಡುವುದು ಸರಿಯಲ್ಲ. 25 ಸಂಸದರು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂಬಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಟ್ವಿಟ್ ಮಾಡಿದ್ದಾರೆ.