ನವದೆಹಲಿ, ಅ.03(Daijiworld News/SS): ಪಾಕ್ ಮೂಲದ ಜೈಷ್ ಎ ಮೊಹಮ್ಮದ್ (ಜೆಇಎಂ) ಉಗ್ರಸಂಘಟನೆಗೆ ಸೇರಿದ ನಾಲ್ವರು ಉಗ್ರರು ರಾಷ್ಟ್ರರಾಜಧಾನಿ ದೆಹಲಿಯನ್ನು ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಭದ್ರತಾ ಸಂಸ್ಥೆಗೆ ಮಾಹಿತಿ ನೀಡಿದೆ.
ಪಾಕಿಸ್ತಾನದಿಂದ ನುಸುಳಿದ್ದಾರೆ ಎನ್ನಲಾಗಿರುವ ಈ ನಾಲ್ವರು ಉಗ್ರರು ಮಾರಕಾಸ್ತ್ರಗಳನ್ನು ಹೊಂದಿದ್ದು ನವರಾತ್ರಿ ಉತ್ಸವದ ವೇಳೆ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಈ ಉಗ್ರರು ರಾಜಧಾನಿಗೆ ನುಸುಳಿದ ಬಗ್ಗೆ ನಿನ್ನೆ ರಾತ್ರಿಯೇ ದೆಹಲಿ ಪೊಲೀಸರನ್ನು ಎಚ್ಚರಿಸಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಈ ಹಿನ್ನಲೆಯಲ್ಲಿ ದೆಹಲಿ ಹಾಗೂ ಸುತ್ತಲಿನ ನಗರಗಳ ಜನನಿಬಿಡ ಪ್ರದೇಶಗಳ ಮೇಲೆ ಪೊಲೀಸ್ ಕಣ್ಗಾವಲು ಇಡಲಾಗಿದೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗಿನಿಂದಲೂ ಪದೇಪದೇ ಉಗ್ರರು ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.