ಲಖನೌ, ಅ 4 (Daijiworld News/MSP): ಉತ್ತರ ಪ್ರದೇಶದ ವ್ಯಕ್ತಿಯೊಬ್ಬನ ದೇಹದ ಅಂಗಾಂಗವನ್ನು ಕಂಡು ವೈದ್ಯಲೋಕವೇ ಚಕಿತಕೊಂಡಿದೆ. ಯಾಕೆಂದರೆ ಆತನ ದೇಹದಲ್ಲಿ ಇರಬೇಕಾದ ಅಂಗಾಂಗಗಳು ಇರಬೇಕಾದ ಸ್ಥಳದಲ್ಲಿ ಇರಲೇ ಇಲ್ಲ. ಎಲ್ಲವೂ ಅದಲು ಬದಲು. ಇದು ಆತನ ದೇಹ ತಪಾಸಣೆಯಿಂದ ಬಯಲಾಗಿದೆ.
ಉತ್ತರ ಪ್ರದೇಶದ ಖುಷಿ ನಗರದ ಪದ್ರೌನಾ ನಿವಾಸಿ ಜಮಾಲುದ್ದೀನ್ ಇತ್ತೀಚೆಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಗೋರಖ್ ಪುರದ ಆಸ್ಪತ್ರೆಗೆ ತೆರಳಿದ್ದರು. ವೈದ್ಯರು ರೋಗ ತಪಾಸಣೆಗಾಗಿ ಸ್ಕಾನಿಂಗ್ ಮಾಡಿದಾಗ ವೈದ್ಯರಿಗೆ ಶಾಕ್ ಆಗಿತ್ತು. ಯಾಕೆಂದರೆ ಆತನ ದೇಹದಲ್ಲಿ ಇರಬೇಕಾದ ಅಂಗಾಂಗಗಳು ಇರಬೇಕಾದ ಸ್ಥಳದಲ್ಲಿ ಇಲ್ಲದಿರುವುದನ್ನು ಕಂಡು ವೈದ್ಯರು ಕ್ಷಣ ಕಾಲ ದಂಗಾಗಿದ್ದರು. ಅಂಗಾಂಗಳೆಲ್ಲವೂ ಅದಲು ಬದಲು ಅಂದರೆ ದೇಹದ ಮತ್ತೊಂದು ಬದಿಯಲ್ಲಿ ಜೋಡಿಸಲ್ಪಟ್ಟಿತ್ತು.
ಆತನ ಹೃದಯ ಎಡಭಾಗದ ಬದಲು ಬಲಭಾಗದಲ್ಲಿ , ಬಲಭಾಗದಲ್ಲಿ ಇರಬೇಕಾದ ಲಿವರ್ ಎಡಭಾಗದಲ್ಲಿ ಇತ್ತು. ಈ ರೀತಿಯ ಸ್ಥಿತಿಯನ್ನು ಸೈಟಸ್ ಇನ್ ವರ್ಸಸ್ ಎಂದು ಕರೆಯಲಾಗುತ್ತದೆ . ಇದೊಂದು ಅಪರೂಪದ ಪ್ರಕರಣವಾಗಿದೆ. ವಿಶ್ವದ ಕೆಲವೇ ವ್ಯಕ್ತಿಗಳ ದೇಹವು ಈ ರೀತಿಯ ಅಂಗರಚನೆಯನ್ನು ಹೊಂದಿರುತ್ತದೆ. ಕನ್ನಡಿಯಲ್ಲಿ ನೋಡಿದಾಗ ಕಾಣುವಂತೆ ಇಂತಹ ವ್ಯಕ್ತಿಗಳ ಅಂಗಾಂಗಗಳು ತದ್ವಿರುದ್ದವಾಗಿ ಇರುತ್ತದೆ. ಆದರೆ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಜಮಾಲುದ್ದೀನ್ ಅವರ ಪಿತ್ತಕೋಶದಲ್ಲಿ ಕಲ್ಲುಗಳ ಪತ್ತೆಯಾಗಿತ್ತು. ಇಂತಹ ದೇಹವಿರುವ ವ್ಯಕ್ತಿಗಳ ಶಸ್ತ್ರಚಿಕಿತ್ಸೆ ತುಂಬಾ ಕಷ್ಟಕರ ಅದರು ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಸರ್ಜನ್ ಡಾ. ಶಶಿಕಾಂತ್ ದೀಕ್ಷಿತ್ ಹೇಳಿದ್ದಾರೆ.
1643 ರಲ್ಲಿ ದೇಹದ ಅದಲು ಬದಲು ಭಾಗದಲ್ಲಿ ಅಂಗಗಳಿರುವ ಮೊಟ್ಟಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ಸ್ಪ್ಯಾನಿಷ್ ಸಿಂಗರ್ ಎನ್ರಿಕ್ ಇಗ್ಲೇಷಿಯಷ್ , ಕೆನಡಿಯನ್ - ಅಮೆರಿಕನ್ ನಟಿ ಕ್ಯಾಥರೀನ್ ಒಹಾರಾ ಮತ್ತು ಅಮೇರಿಕನ್ ಗಾಯಕ ಡೊನ್ನಿ ಓಸ್ಮಂಡ್ ಅವರು ತದ್ವಿರುದ್ದ ಅಂಗ ರಚನೆಯುಳ್ಳ ಸೆಲೆಬ್ರಿಟಿಗಳಾಗಿದ್ದಾರೆ.