ಮುಂಬೈ, ಅ 04 (Daijiworld News/MSP): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮತ್ತೊಮ್ಮೆ ರೆಪೋ ರೇಟ್ ಇಳಿಕೆ ಮಾಡಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಆರ್ ಬಿಐ ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, 5ನೇ ಬಾರಿ ಬಡ್ಡಿದರವನ್ನು ಕಡಿತಗೊಳಿಸುವ ಮೂಲಕ ಆರ್ಥಿಕ ಚೇತರಿಕೆಗೆ ಪ್ರಾಶಸ್ಯ ನೀಡಿದೆ. ಒಟ್ಟಾರೆ ವರ್ಷದಲ್ಲಿ 135 ಬೇಸಿಸ್ ಪಾಯಿಂಟ್ಸ್ ನಷ್ಟು ರೆಫೋ ದರವನ್ನು ಆರ್ ಬಿ ಐ ಇಳಿಸಿದೆ.
ಆರ್ ಬಿಐ ಗವರ್ನರ್ ಹಾಗೂ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಆರು ಸದಸ್ಯರ ಮಾನಿಟರಿ ಪಾಲಿಸಿ ಕಮಿಟಿ, ರೆಪೋ ದರ ಇಳಿಕೆಗೆ ಸಮ್ಮತಿ ನೀಡಿದೆ. ಹೀಗಾಗಿ ರೆಪೋ ದರ ಶೇ.5.15ಕ್ಕೆ ಬಂದಿದೆ.
ಪ್ರಸ್ತುತ ಹಣದುಬ್ಬರ ನಿಯಂತ್ರಿಸಿ ಆರ್ಥಿಕ ಚೇತರಿಕೆಗೆ ಕ್ರಮ ಕೈಗೊಳ್ಳಲು ಆರ್ ಬಿಐ ಕೂಡಾ ಮುಂದಾಗಿದ್ದು ಇದೀಗ ಸತತ 5ನೇ ಬಾರಿ ಶೇ.5.40ರಿಂದ ಶೇ.5,15ಕ್ಕೆ ಇಳಿಕೆ ಮಾಡಿ 25 ಅಂಶಗಳನ್ನು ರೆಪೋದರವನ್ನು ಕಡಿತ ಮಾಡಿದೆ.
ರೆಪೋ ದರ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ಅನಿರೀಕ್ಷಿತ ರೀತಿಯಲ್ಲಿ ಸತತವಾಗಿ ಕುಸಿಯುತ್ತಿರುವ ದೇಶದ ಆರ್ಥಿಕತೆಗೆ ಪುಷ್ಟಿ ನೀಡುವ ಪ್ರಯತ್ನ ಆರ್ ಬಿ ಐಯದ್ದಾಗಿದೆ.