ತಿರುವನಂತಪುರಂ, ಅ 4 (Daijiworld News/RD): ಕರ್ನಾಟಕದ ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡಬೇಕೆಂಬ ಕೇರಳದ ವಯನಾಡಿನ ಜನತೆ ಆಗ್ರಹಿಸಿದ್ದು, ಅವರ ಹೋರಾಟಕ್ಕೆ ಸಂಸದ ರಾಹುಲ್ ಗಾಂಧಿ ಆಗಮಿಸಿ ಬೆಂಬಲ ಸೂಚಿಸಿದ್ದಾರೆ.
ಹುಲಿ ಸಂರಕ್ಷಿತ ಬಂಡೀಪುರ ರಾಷ್ಟ್ರೀಯ ಉದ್ಯಾವನದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೇರಳ ಜನರು ಆಗ್ರಹಿಸಿದ್ದು, ಇದಕ್ಕೆ ವಯನಾಡ್ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸಂಸದ ರಾಹುಲ್ ಗಾಂಧಿ ಇಲ್ಲಿಗೆ ಭೇಟಿ ನೀಡಿ ಪ್ರತಿಭಟನೆಗೆ ತನ್ನ ನೈತಿಕ ಬೆಂಬಲವನ್ನು ಸೂಚಿಸಿದ್ದಾರೆ.
ಬಂಡೀಪುರ ರಾಷ್ಟ್ರೀಯ ಹೆದ್ದಾರಿ 766 ಕರ್ನಾಟದಿಂದ ತಮಿಳುನಾಡು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಅರಣ್ಯ ಭಾಗವಾಗಿರುವುದರಿಂದ ರಾತ್ರಿಯ ವೇಳೆ ವಾಹನ ಸಂಚಾರ ಇರುವುದರಿಂದ ಅಸಂಖ್ಯಾತ ಪ್ರಾಣಿಗಳು ಅಪಘಾತಕ್ಕೆ ಒಳಗಾಗಿ ತಮ್ಮ ಜೀವವನ್ನು ಕಳೆದುಕೊಂಡಿವೆ. ಇಗೀಗ ಈ ಕಾರಣಕ್ಕೆ ಕರ್ನಾಟಕ ರಾಜ್ಯ ಸರ್ಕಾರ ದಶಕಗಳ ಹಿಂದೆಯೇ ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6ರ ವರೆಗೆ ವಾಹನ ಸಂಚಾರವನ್ನು ನಿಷೇಧಿಸಿತ್ತು. ಆದರೆ, ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೆ ತಮಿಳುನಾಡು ಹಾಗೂ ಕೇರಳ ವಿರೋಧ ವ್ಯಕ್ತಪಡಿಸಿ, ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿದ್ದರು. ಇದೀಗ ಈ ಕುರಿತ ಪ್ರತಿಭಟನೆ ಮತ್ತೆ ನಡೆಯುತ್ತಿದ್ದು, ಶುಕ್ರವಾರ ಕ್ಷೇತ್ರಕ್ಕೆ ಭೇಟಿ ನೀಡಿದ ವಯನಾಡ್ ಸಂಸದ ಹಾಗೂ ಮಾಜಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕೇರಳಕ್ಕೆ ನೈತಿಕ ಬೆಂಬಲ ನೀಡಿದ್ದಾರೆ.
ಆ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿ ’ಬಂಡೀಪುರ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಪ್ರತಿದಿನ ರಾತ್ರಿ 9 ಗಂಟೆ ವಾಹನ ಸಂಚಾರಕ್ಕೆ ನಿಷೇಧ ಹೇರಿರುವ ಕರ್ನಾಟಕ ಸರ್ಕಾರದ ವಿರುದ್ಧ ಕೇರಳದ ಯುವ ಜನ ಸೆಪ್ಟೆಂಬರ್ 25 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಈ ನಡೆಯಿಂದ ಉಭಯ ರಾಜ್ಯಗಳ ಲಕ್ಷಾಂತರ ಜನ ಸಂಕಷ್ಟ ಅನುಭವಿಸಬೇಕಾಗಿದೆ. ಈ ಸಮಸ್ಯೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪರಿಹರಿಸಿ” ಎಂದು ಮನವಿ ಮಾಡಿಕೊಂಡಿದ್ದಾರೆ.