ಬೆಂಗಳೂರು,ಅ 4 (Daijiworld News/RD): ಮಾಜಿ ಗೆಳತಿಯ ಪೋಟೋಗಳನ್ನು ಆಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದ ಮೇಲೆ ಬೆಂಗಳೂರಿನ ಸ್ಟಾರ್ಟ್ ಅಪ್ ಸಿಇಓನನ್ನ್ನು ಪೊಲೀಸರು ಬಂಧಿಸಿದ್ದಾರೆ.
28 ವರ್ಷದ ರಾಹುಲ್ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ, ಈತ ತನ್ನ ಮಾಜಿ ಪ್ರೇಯಸಿಯ ಪೋಟೋಗಳನ್ನು ಆಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ಆಕೆ ದೂರು ನೀಡಿದ್ದು, ಆತನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಇದೀಗ ಆಕೆ ನೀಡಿದ ದೂರಿನ ಆಧಾರದ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಯಿಂದ ಲ್ಯಾಪ್ಟಾಪ್, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡೆಪ್ಯೂಟಿ ಕಮಿಷನರ್ ಇಶಾ ಪಂತ್ ಹೇಳಿದ್ದಾರೆ.
ಮಾಜಿ ಪ್ರೇಯಸಿ ಸೆಪ್ಟೆಂಬರ್ 12 ರಂದು ಆತನ ವಿರುದ್ಧ ದೂರು ದಾಖಲಿಸಿದ್ದಳು. ಆದರೆ ಆ ಬಳಿಕ ಆಕೆಯನ್ನು ಬೆಂಬಿಡದಂತೆ ಕಾಡಿದ ರಾಹುಲ್ ಆಕೆಯ ಮನೆಗೆ ನುಗ್ಗಿದ ಮಾತ್ರವಲ್ಲದೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಇದರ ಜೊತೆಗೆ ಆಕೆಯ ಅನುಮತಿಯಿಲ್ಲದೆ ಅವಳ ಫೋನ್ ಕದ್ದು, ಫೇಸ್ಬುಕ್ ಆಕ್ಸೆಸ್ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.