ನವದೆಹಲಿ, ಅ 04 (DaijiworldNews/SM): ರಾಜಕೀಯ ನಾಯಕರ ವಾಕ್ಸಮರ, ಜನಸಾಮಾನ್ಯರ ಆಕ್ರೋಶದ ಬಳಿಕ ಇದೀಗ ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆಗೊಂಡಿದೆ. ಸುಮಾರು 60 ದಿನಗಳ ಬಳಿಕ ಇದೀಗ ಕೇಂದ್ರ ಪರಿಹಾರ ಘೋಷಣೆ ಮಾಡಿದೆ.
ಪ್ರವಾಹ ಪರಿಹಾರವಾಗಿ ಸುಮಾರು 1200 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ. ಆ ಮೂಲಕ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ಗೋಳು ಕೊನೆಗೂ ಕೇಂದ್ರ ಸರ್ಕಾರದ ಕಿವಿಗೆ ಬಿದ್ದಂತಾಗಿದೆ.
ಎನ್ ಡಿಆರ್ ಎಫ್ ನಿಂದ ಕೇಂದ್ರ ಸರ್ಕಾರ 1,200 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ. ರಾಜ್ಯದಲ್ಲಿ ಪ್ರವಾಹದಿಂದಾಗಿ ಬಹುತೇಕ ಜಿಲ್ಲೆಗಳು ತತ್ತರಿಸಿವೆ. ಉತ್ತರ ಕರ್ನಾಟಕವಂತೂ ಅಕ್ಷರಶಃ ನಲುಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಪರಿಹಾರ ಬಿಡುಗಡೆಗೊಳಿಸಬೇಕೆಂಬ ಒತ್ತಾಯಗಳು ತೀವ್ರವಾಗಿ ಕೇಳಿಬಂದಿದ್ದವು.
ಅಲ್ಲದೆ, ರಾಜ್ಯ ಸರಕಾರ ಕೇಂದ್ರಕ್ಕೆ ಬರ ಪರಿಹಾರಕ್ಕೆ ವರದಿಯನ್ನು ಕೂಡ ಸಲ್ಲಿಸಿತ್ತು. ಅಲ್ಲದೆ, 35,000 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿತ್ತು. ಈ ನಡುವೆ ಕೇಂದ್ರ ಸರಕಾರ ವರದಿಯ ಬಗ್ಗೆ ಗೊಂದಲವಿದೆ ಎಂದು ಸ್ಪಷ್ಟನೆ ಕೇಳಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ, ಇದೀಗ ಈ ಎಲ್ಲಾ ಬೆಳವಣಿಗೆಯ ನಡುವೆಯ ನಡುವೆಯೇ, ರಾಜ್ಯಕ್ಕೆ ಪ್ರವಾಹ ಪರಿಹಾರ ಬಿಡುಗಡೆಗೊಂಡಿದ್ದು, ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ.