ನವದೆಹಲಿ, ಅ.05(Daijiworld News/SS): ಅ.17ರೊಳಗೆ ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ವಿಚಾರಣೆಯನ್ನು ಮುಕ್ತಾಯಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯರ ಸಂವಿಧಾನ ಪೀಠ ಸುದೀರ್ಘ ವಾದಗಳ ಅಂತಿಮ ಹಂತದ ವೇಳಾಪಟ್ಟಿಯನ್ನು ನಿಗದಿಪಡಿಸಿತು.
ಅಕ್ಟೋಬರ್ 17ರೊಳಗೆ ಹಿಂದೂ ಹಾಗೂ ಮುಸ್ಲಿಂ ಕಕ್ಷಿದಾರರ ಎಲ್ಲವಾದ ಪ್ರತಿವಾದಗಳನ್ನು ಆಲಿಸಿ ವಿಚಾರಣೆ ಪೂರ್ಣಗೊಳಿಸಲಾಗುವುದೆಂದು ಹೇಳಿದೆ. ಮುಸ್ಲಿಂ ಅರ್ಜಿದಾರರಿಗೆ ವಾದ ಪೂರ್ಣಗೊಳಿಸಲು ಅ.14ರವರೆಗೆ ಸಮಯ ನೀಡಲಾಗುವುದು ಮತ್ತು ನಂತರದ ಎರಡು ದಿನಗಳನ್ನು ಹಿಂದೂ ಕಕ್ಷಿದಾರರಿಗೆ ಪ್ರತಿ ವಾದ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಎ ನಜೀರ್ ಅವರನ್ನೊಳಗೊಂಡ ನ್ಯಾಯಪೀಠ, ಈ ಮೊದಲು ವಿಚಾರಣೆಯನ್ನು ಮುಕ್ತಾಯಗೊಳಿಸಲು ಅಕ್ಟೋಬರ್ 18ರ ಗಡುವನ್ನು ನಿಗದಿ ಮಾಡಿತ್ತು. ಸಿಜೆಐ ರಂಜನ್ ಗೊಗೋಯ್ ನವೆಂಬರ್ 17ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಈ ಮೊದಲು ತೀರ್ಪು ಪ್ರಕಟಿಸುವ ಗುರಿ ನ್ಯಾಯಪೀಠದ ಮುಂದಿದೆ.
ಸಿಜೆಐ ರಂಜನ್ ಗೊಗೋಯ್ ನವೆಂಬರ್ 18ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದ ತೀರ್ಪನ್ನು ನವೆಂಬರ್ 17ರೊಳಗೆ ಘೋಷಿಸಲಾಗುತ್ತದೆ.