ಬೆಂಗಳೂರು, ಅ.05(Daijiworld News/SS): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೇರಳ ರಾಜ್ಯದಿಂದ 2.9 ಕಿ. ಮೀ. ವೇಗದಲ್ಲಿ ಮೋಡಗಳ ಚಲನೆ ಇದೆ. ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಮೇಲ್ಮೈ ಸುಳಿಗಾಳಿ ಬೀಸುತ್ತಿದೆ. ಇದರ ಪರಿಣಾಮ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ.
ಈಗಾಗಲೇ ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಜಯನಗರ, ಬಸವನಗುಡಿ, ಮೆಜೆಸ್ಟಿಕ್, ಶಿವಾಜಿನಗರ ಸೇರಿದಂತೆ ನಗರ ಮತ್ತು ನಗರದ ಹೊರ ಪ್ರದೇಶಗಳಲ್ಲಿ ಮಳೆಯಾಗಿದೆ. ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೂ 5 ದಿನ ಮಳೆಯಾಗಲಿದೆ. ಮಾತ್ರವಲ್ಲ ಬಳ್ಳಾರಿ, ಬೀದರ್, ತುಮಕೂರು, ಕೋಲಾರ, ಬೆಂಗಳೂರು, ಉಡುಪಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.