ಬೆಂಗಳೂರು, ಅ 5 (Daijiworld News/RD):ರಾಜ್ಯದ ಪ್ರವಾಹ ಸಂತ್ರಸ್ತರ ಗೋಳು ಕೊನೆಗೂ ಕೇಂದ್ರಕ್ಕೆ ಕೇಳಿಸಿದ್ದು, ಹಲವು ಆರೋಪ ಪ್ರತ್ಯಾರೋಪಗಳ ಬಳಿಕ ಕೇಂದ್ರ ಸರ್ಕಾರ 1,200 ಕೋಟಿ ರೂಪಾಯಿ ಘೋಷಣೆ ಮಾಡಿದ್ದು, ಶನಿವಾರವೇ ಹಣ ಬಿಡುಗಡೆ ಮಾಡುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿತ್ತ ಸಚಿವೆ, 'ಶನಿವಾರ ಬೆಳಿಗ್ಗೆಯೇ ನೆರೆ ಪರಿಹಾರ ಹಣವನ್ನು ಬಿಡುಗಡೆ ಮಾಡುವುದಾಗಿ ಹಣಕಾಸು ಸಚಿವಾಲಯ ನನಗೆ ಭರವಸೆ ನೀಡಿದೆ' ಎಂದು ತಿಳಿಸಿದ್ದಾರೆ.
ಹಾಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್ಡಿಆರ್ಎಫ್) 1813.75 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಕರ್ನಾಟಕಕ್ಕೆ 1200 ಕೋಟಿ ರೂಪಾಯಿ ಮತ್ತು ಬಿಹಾರಕ್ಕೆ 400 ಕೋಟಿ ರೂಪಾಯಿ ನೀಡಲಾಗಿದೆ. ಈ ಹಣವನ್ನು ಇಂದು ಮುಂಜಾನೆಯೇ ಬಿಡುಗಡೆ ಮಾಡುವುದಾಗಿ ವಿತ್ತ ಸಚಿವರು ತಿಳಿಸಿದ್ದಾರೆ.
ನೆರೆ ಬಂದು 60 ದಿನಗಳ ಬಳಿಕ ಕೇಂದ್ರ 1,200 ಕೋಟಿ ರೂಪಾಯಿ ಘೋಷಣೆ ಮಾಡಿದೆ. ರಾಜ್ಯದ ಜನತೆಯ ಪರವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.