ಬೆಂಗಳೂರು, ಅ 5 (Daijiworld News/RD): ಪಕ್ಷದ ಮುಖಂಡರು ಪಕ್ಷದ ಶಿಸ್ತು, ನಿಯಮವನ್ನು ಪಾಲಿಸುತ್ತಾ ಸಂಯಮದಿಂದ ವರ್ತಿಸಬೇಕು. ಅದನ್ನು ಉಲ್ಲಂಘಿಸದರೆ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದ್ದ ಮೈತ್ರಿ ಸರ್ಕಾರ ಕಳೆದ ವರ್ಷ ಕೊಡಗಿನ ಪ್ರವಾಹಪೀಡಿತ ಪ್ರದೇಶದಲ್ಲಿ 97,000 ರೂ. ಪರಿಹಾರ ಘೋಷಿಸಿದ್ದರೂ ಈವರೆಗೆ ಹಣ ಬಿಡುಗಡೆಯಾಗಿಲ್ಲ. ಆದರೆ ನಮ್ಮ ಸರ್ಕಾರ ಈಗಾಗಲೇ ಮನೆ ನಿರ್ಮಾಣಕ್ಕೆ ಮುಂಗಡವಾಗಿ 1 ಲಕ್ಷ ರೂ.ಗಳನ್ನು ಸಂತ್ರಸ್ತರ ಖಾತೆಗೆ ಜಮೆ ಮಾಡಲಾಗಿದೆ. ಹಾಗಾಗಿ ಮಾತನಾಡುವಾಗ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನೆರೆ ಪರಿಹಾರ ವಿಚಾರದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸಂತ್ರಸ್ತರ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ಪರಿಹಾರ ವಿತರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಸ್ಪಂದಿಸಿದ್ದು ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ನೆರೆ ಪರಿಹಾರ ವಿಳಂಬ ನೀತಿ ಕುರಿತಂತೆ ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದ ವಿಜಯಪುರ ನಗರ ಕ್ಷೇತ್ರದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿಯು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಈ ವಿಚಾರ ಪ್ರಸ್ತಾಪಿಸಿ ಬಿಜಿಪಿ ಪಕ್ಷದ ಮುಖಂಡರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.