ಗರೀಬ್ದಾ, ಅ 05(Daijiworld News/MSP): ಗರ್ಭಿಣಿಯೊಬ್ಬಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುವುದನ್ನು ಕಂಡ ವೈದ್ಯೆಯೊಬ್ಬರು ತಾವೇ ಅಂಬುಲೆನ್ಸ್ ಚಲಾಯಿಸಿಕೊಂಡು ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ ಘಟನೆ ಮೇಘಾಲಯದಲ್ಲಿ ನಡೆದಿದೆ.
ವೈದ್ಯೆ ಡಾ.ಬಲ್ನಾಮ್ಚಿ ಸಂಗ್ಮಾ ಅವರ ಈ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಡಾ.ಸಂಗ್ಮಾ ಅವರು ಮೇಘಾಲಯ ಗರೋಬ್ಧಾ ಪಿಎಚ್ಸಿಯಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಆಸ್ಪತ್ರೆಗೆ ಬಂದ ಗರ್ಭಿಣಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎನ್ನುವುದು ಮನವರಿಕೆಯಾಗಿ, ಮಾತ್ರವಲ್ಲದೆ ಪಿಎಚ್ಸಿಯಲ್ಲಿ ಚಿಕಿತ್ಸೆ ನೀಡಲು ಸೂಕ್ತ ಸೌಲಭ್ಯಗಳಿಲ್ಲದ ಕಾರಣ, ಸರಿಯಾದ ಚಿಕಿತ್ಸೆಗಾಗಿ ಆಕೆಯನ್ನು ತಕ್ಷಣ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ( ಎಂಸಿಎಚ್ ) ತುರಾಕ್ಕೆ ವರ್ಗಾಯಿಸಲು ನಿರ್ಧರಿಸಿದರು.
ಆಕೆಯ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದರಿಂದ ಸಮಯವನ್ನು ವ್ಯರ್ಥ ಮಾಡದೆ, ಆಕೆಯನ್ನು ತಕ್ಷಣ ತುರಾದ ಆಸ್ಪತ್ರೆಗೆ ಕರೆದೊಯ್ಯಬೇಕಾಗಿ ಬಂದಾಗ ಡಾ.ಸಂಗ್ಮಾ ಸ್ವತಃ ಅಂಬುಲೆನ್ಸ್ ಚಲಾಯಿಸಿಕೊಂಡು ಹೋಗಿ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದು ಸರಿಯಾದ ಸಂದರ್ಭದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಅವರ ಕಾರ್ಯವೈಖರಿಯನ್ನು ಕಂಡು ಜನ ಈಗ ಕೊಂಡಾಡುತ್ತಿದ್ದಾರೆ.