ಮೈಸೂರು, ಅ 05(Daijiworld News/MSP): ಬಿಗ್ ಬಾಸ್ ಸೀಸನ್ ಫೈವ್ನಲ್ಲಿ ಹೆಸರು ಮಾಡಿದ್ದ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರು ಶುಕ್ರವಾರ ರಾತ್ರಿ ಯುವ ದಸರಾ ಕಾರ್ಯಕ್ರಮದಲ್ಲಿ ಗೆಳತಿ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿರುವ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಇವರ ಪ್ರೇಮ ನಿವೇದನೆಯಿಂದಾಗಿ ರಾತ್ರಿ 11 ಗಂಟೆಗೆ ಮುಗಿಯಬೇಕಿದ್ದ ಯುವ ದಸರಾ ಕಾರ್ಯಕ್ರಮವು ಇವರಿಬ್ಬರ ನಿಶ್ಚಿತಾರ್ಥದಿಂದಾಗಿ ಒಂದು ಗಂಟೆ ತಡವಾಗಿ ಮುಕ್ತಾಯಗೊಂಡಿತ್ತು. ಇದೀಗ ಈ ಜೋಡಿಯ ರೊಮ್ಯಾಂಟಿಕ್ ಪ್ರೇಮ ನಿವೇದನೆ ಕೆಲವರ ಕಣ್ಣು ಕೆಂಪಾಗುವಂತೆ ಮಾಡಿದ್ದು, ಯುವ ದಸರಾ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ವಿವಾದ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಖಾಸಗಿ ಕಾರ್ಯಕ್ರಮದಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳುವುದು ಬಿಟ್ಟು, ಇಂತಹ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿ ವೇದಿಕೆಯಲ್ಲಿ ಪ್ರೇಕ್ಷಕರ ಸಮ್ಮುಖದಲ್ಲೇ ನಿವೇದಿತಾಗೆ ಪ್ರೊಪೋಸ್ ಮಾಡಿದ ಚಂದನ್ ತನ್ನ ನಿವೇದಿತಾಗೆ ಉಂಗುರ ತೊಡಿಸಿ ಆಲಂಗಿಸಿ ಇಬ್ಬರೂ ಪರಸ್ಪರ ಮುತ್ತನ್ನೂ ವಿನಿಮಯ ಮಾಡಿಕೊಂಡಿದ್ದರು.
ಈ ವಿಚಾರವಾಗಿ ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ ಕೂಡಾ ಗರಂ ಆಗಿದ್ದು, ಇದು ಅಕ್ಷಮ್ಯ ಅಪರಾಧ ಎಂದಿದ್ದಾರೆ.ಯುವ ದಸರಾ ವೇದಿಕೆ ಚಾಮುಂಡಿಶ್ವರಿಯ ದೇವರ ಸನ್ನಿಧಿ. ಆ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ನಡೆ ಸರಿಯಲ್ಲ. ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಶಿಕ್ಷೆ ನೀಡುತ್ತಾಳೆ. ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ ಎಂದಿದ್ದಾರೆ.
ಚಂದನ್ ಮತ್ತು ನಿವೇದಿತಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸೋಮಣ್ಣ, ಯುವ ದಸರಾ ವೇದಿಕೆ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಾಗಿದೆ. ಭಗವಂತನ ಸನ್ನಿಧಿಯಲ್ಲಿ ಈ ರೀತಿಯ ನಡೆ ಸರಿಯಲ್ಲ ಇವರಿಗೆ ಆ ದೇವಿ ಇನ್ನಾರು ತಿಂಗಳಲ್ಲಿ ತಕ್ಕ ಶಿಕ್ಷೆ ನೀಡುತ್ತಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ಕನ್ನಡಿಗರು, ನಮ್ಮ ಸಂಸ್ಕ್ರತಿ ಆಚಾರ ವಿಚಾರ ಅರಿತುಕೊಂಡವರು ಎಂದು ತಿಳಿದಿದ್ದೆ.. ಆದರೆ ಇವರಿಗೆ ಸಂಸ್ಕ್ರತಿ ಇಲ್ಲ. ಇವರ ವಿರುದ್ದ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಕಾರಣ ಕೇಳಿ ನೋಟಿಸ್ ನೀಡುವುದಕ್ಕೆ ಎಸ್ಪಿಗೂ ನಿರ್ದೇಶನ ನೀಡಿದ್ದೇನೆ .