ಬಾರಾಮುಲ್ಲಾ, ಅ.05(Daijiworld News/SS): ಇಲ್ಲಿನ ಉತ್ತರ ಕಾಶ್ಮೀರ ಜಿಲ್ಲೆಯ ಉರಿ ಪ್ರದೇಶದ ಹೊರ ಠಾಣೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ಮತ್ತು ಶೆಲ್ ದಾಳಿ ನಡೆಸಿದ್ದಾರೆ. ಕೂಲಿ ಕಾರ್ಮಿಕರು ಕಾಮಲ್ಕೋಟ್ ಪ್ರದೇಶದ ಹೊರ ಠಾಣೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದಾಗ ಪಾಕ್ ಸೈನಿಕರು ಸಿಡಿಸಿದ ಶೆಲ್'ವೊಂದು ಸ್ಫೋಟಗೊಂಡ ಪರಿಣಾಮ ಓರ್ವ ಕೂಲಿ ಕಾರ್ಮಿಕ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಇಬ್ಬರು ಕೂಲಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ವೇಳೆ ಭಾರತೀಯ ಪಡೆಗಳು ಪ್ರತಿ ದಾಳಿ ನಡೆಸಿದ್ದು, ಗಡಿ ನಿಯಂತ್ರಣ ರೇಖೆಯಾದ್ಯಂತ ಪಾಕಿಸ್ತಾನದ ಹೊರ ಠಾಣೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಆದಾಗ್ಯೂ. ಪಾಕಿಸ್ತಾನದ ಕಡೆಯಿಂದ ಉಂಟಾದ ಹಾನಿಯ ಬಗ್ಗೆ ತಕ್ಷಣ ತಿಳಿದುಬಂದಿಲ್ಲ.
ಎಲ್ಒಸಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಸೈನಿಕರು ಈಗಾಗಲೇ ಮುನ್ನೆಚ್ಚರಿಕಾ ಕ್ರಮವಹಿಸಿದ್ದು, ಪಿಒಕೆಯಿಂದ ಯಾವುದೇ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಅಲ್ಲಿ ಹೆಚ್ಚಿನ ಸಂಖ್ಯೆಯ ತರಬೇತಿ ಪಡೆದ ಉಗ್ರರು ಲಾಂಚ್ ಪ್ಯಾಡ್ನಲ್ಲಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.