ವಿಜಯಪುರ, ಅ.05(Daijiworld News/SS): ಶೀಘ್ರದಲ್ಲೇ ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಧನ ಬಿಡುಗಡೆಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಗಳು ಮತ್ತು ಪುನರ್ವಸತಿಗಾಗಿ ರಾಜ್ಯ ಸರ್ಕಾರ ಈಗಾಗಲೇ 2,500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಹಣವಿದೆ. ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.
1,200 ಕೋಟಿ ರೂ.ಗಳ ಮಧ್ಯಂತರ ನೆರೆ ಪರಿಹಾರವನ್ನು ಬಿಡುಗಡೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಸರ್ಕಾರ 34,000 ಕೋಟಿ ರೂ. ಪ್ರವಾಹ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಈಗ ತಾತ್ಕಾಲಿಕ ಪರಿಹಾರ ದೊರೆತಿದೆ. ಶೀಘ್ರದಲ್ಲೇ ಹೆಚ್ಚಿನ ಅನುದಾನ ಬಿಡುಗಡೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಔರಾದ್ಕರ್ ವರದಿ ಅನುಷ್ಠಾನವನ್ನು ಉಲ್ಲೇಖಿಸಿದ ಅವರು, ಒಂದೆರಡು ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ಅನುದಾನವನ್ನು ಖಾತರಿಪಡಿಸುತ್ತೇವೆ. ಪ್ರಸ್ತುತ, ಸರ್ಕಾರದ ಮುಂದೆ ಹೊಸ ಜಿಲ್ಲಾ ರಚನೆಯ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ತಿಳಿಸಿದರು.