ನವದೆಹಲಿ, ಅ.05(Daijiworld News/SS): ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಕ್ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದು, ಇಮ್ರಾನ್ ಖಾನ್ ಅವರ ಬೇಜವಾಬ್ದಾರಿ ನಡವಳಿಕೆಗೆ ಸಾಕ್ಷಿ. ಭಾರತದ ವಿರುದ್ಧವಾಗಿ ಅವರು ಜಿಹಾದಿಗೆ ಕರೆ ನೀಡಿದ್ದು ಸರಿಯಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ವಿಧಿ ರದ್ದತಿಯನ್ನು ಹಿಂಪಡೆಯುವಂತೆ ಪಾಕಿಸ್ತಾನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವನ್ನು ಆಗ್ರಹಿಸಿತ್ತು. ಈ ಹಿನ್ನಲೆಯಲ್ಲಿ ಭಾರತದ ವಿದೇಶಾಂಗ ಇಲಾಖೆ ಕಿಡಿಕಾರಿದ್ದು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ಗೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಹೇಗೆ ಗಳಿಸಿ, ಉಳಿಸಿಕೊಳ್ಳಬೇಕು ಎಂಬುದೇ ತಿಳಿದಿಲ್ಲ ಎಂದು ದೂರಿದ್ದಾರೆ.
ಮಾತ್ರವಲ್ಲ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾಪ ಮಾಡಿದ ಮಲೇಷ್ಯಾ ಹಾಗೂ ಟರ್ಕಿ ದೇಶಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಜತೆಗಿನ ಸ್ನೇಹ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಮಲೇಷ್ಯಾ ಹಾಗೂ ಟರ್ಕಿ ಮಾತನಾಡಬೇಕಿತ್ತು. ಕಾಶ್ಮೀರ ವಿವಾದ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಎಂಬುದನ್ನು ಅವುಗಳು ಗಮನಿಸಬೇಕಿತ್ತು ಎಂದು ಹೇಳಿದ್ದಾರೆ.