ಒಡಿಶಾ, ಅ 6 (Daijiworld News/RD): ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಪೆಟ್ರೋಲ್ ಖಾಲಿಯಾಗಿ ದಾರಿ ಮಧ್ಯೆ ನಿಂತ ಪರಿಣಾಮ ಮಹಿಳೆ ಮೃತಪಟ್ಟ ದಾರುಣ ಘಟನೆ ಒಡಿಶಾದ ಹನಾಡದಲ್ಲಿ ನಡೆದಿದೆ.
ಹನಾಡ ಗ್ರಾಮದ ಚಿತ್ತರಂಜನ್ ಮುಂಡಾ ಅವರ ಪತ್ನಿ ತುಳಸಿ ಮುಂಡಾ ಸಾವನ್ನಪ್ಪಿದ್ದಾರೆ. ಗರ್ಭಿಣಿಯಾಗಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಕೆಯ ಪರಿಸ್ಥಿತಿ ಗಂಭಿರವಾಗಿದ್ದ ಕಾರಣ ಆಕೆಯನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ್ದರು. ಆದರೆ ಆಸ್ಪತ್ರೆಯಿಂದ ಅಥವಾ ಯಾವುದೇ ಸರಕಾರಿ ಆಂಬುಲೆನ್ಸ್ ಸಿಗದ ಕಾರಣ ಚಿತ್ತರಂಜನ್ ಖಾಸಗಿ ಆಂಬುಲೆನ್ಸ್ ನಲ್ಲಿ ಪತ್ನಿಯನ್ನು ಕರೆದುಕೊಂಡು ಹೋದರು.
ಆದರೆ ಖಾಸಗಿ ಆಂಬುಲೆನ್ಸ್ ಪೆಟ್ರೋಲ್ ಖಾಲಿಯಾಗಿ ನಡು ದಾರಿಯಲ್ಲಿ ನಿಂತು ಬಿಟ್ಟಿತ್ತು. ಎರಡು ಘಂಟೆಯ ನಂತರ ಇನ್ನೊಂದು ಆಂಬುಲೆನ್ಸ್ ದೊರೆತಿದ್ದು, ಅಸ್ಪತ್ರೆಗೆ ದಾಖಲಿಸುವ ವೇಳೆಗೆ ಈ ಗರ್ಭಿಣಿ ಮಹಿಳೆ ಕೊನೆಯುಸಿರೆಳೆದಿದ್ದಾರೆ