ಚಿತ್ರದುರ್ಗ, ಅ 06 (DaijiworldNews/SM): ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುಡುಗಿದ್ದಾರೆ. ಕೇಂದ್ರದಿಂದ ಎರಡನೇ ಹಂತದ ನೆರೆ ಪರಿಹಾರ ಬರೋದಿಲ್ಲ ಎನ್ನಲು ಹೆಚ್ ಡಿಕೆ ಏನು ಪ್ರಧಾನಮಂತ್ರಿಯಾ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರದಿಂದ ಎರಡನೇ ಕಂತು ಹಣ ಬರೋದಿಲ್ಲ ಅಂತಾ ಹೇಳೋದಿಕ್ಕೆ ಅವರಿಗೆ ಏನು ಅಧಿಕಾರ ಇದೆ. ಓರ್ವ ಮಾಜಿ ಸಿಎಂ ಈ ರೀತಿಯ ಕೀಳುಮಟ್ಟದ ರಾಜಕೀಯ ನಡೆಸಬಾರದು. ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು. ಕೇಂದ್ರ ಸರ್ಕಾರ ಎರಡನೇ ಕಂತು ಕೂಡ ಬಿಡುಗಡೆ ಮಾಡುತ್ತದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಪ್ರವಾಹ ತೀವ್ರವಾಗಿದ್ದರಿಂದ ತಕ್ಷಣಕ್ಕೆ ಕೇಂದ್ರ ಸರಕಾರ ಮೊದಲ ಕಂತಿನ ರೂಪದಲ್ಲಿ ಸುಮಾರು 1200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಮುಂದಿನ ತಿಂಗಳಿನಲ್ಲಿ ಮತ್ತಷ್ಟು ಪರಿಹಾರ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬೆಳೆ ನಷ್ಟದ ಆಧಾರದಲ್ಲಿ ಪರಿಶೀಲನೆ ನಡೆಸಿ ಪರಿಹಾರ ವಿತರಿಸಲಾಗುವುದಾಗಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.