ಜಮ್ಮು, ಅ.07(Daijiworld News/SS): ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದ್ದು, 200-300 ಜನ ಭಯೋತ್ಪಾದಕರು ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಘ್ ಸಿಂಗ್ ಹೇಳಿದ್ದಾರೆ.
ಭಾರತೀಯ ಸೇನೆಯಿಂದ ಪ್ರತಿದಾಳಿ ನಡೆದ ಹೊರತಾಗಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರು ಒಳನುಸುಳಿದ್ದಾರೆ. ಚಳಿಗಾಲದ ವೇಳೆಗೆ ಆದಷ್ಟೂ ಹೆಚ್ಚು ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸಲು ಪಾಕಿಸ್ತಾನ ಗಡಿಯಾಚೆಗಿನ ಗುಂಡಿನ ದಾಳಿಯನ್ನು ನಿರಂತರವಾಗಿ ನಡೆಸುತ್ತಿದೆ.
ಭಯೋತ್ಪಾದಕರನ್ನು ಆದಷ್ಟೂ ಒಳಗೆ ಕಳಿಸಲು ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆಯನ್ನು ತೀವ್ರಗೊಳಿಸಿದೆ ಎಂದು ಡಿಜಿಪಿ ಹೇಳಿದ್ದಾರೆ. 200-300 ಭಯೋತ್ಪಾದಕರು ಜಮ್ಮು-ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಇದೇ ಸಂಖ್ಯೆ ಅಂತಿಮವಲ್ಲ ಎಂದು ದಿಲ್ಬಾಘ್ ಸಿಂಗ್ ಮಾಹಿತಿ ನೀಡಿದ್ದಾರೆ.