ನವದೆಹಲಿ, ಅ.07(Daijiworld News/SS): ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂವಿವಾದವನ್ನು ಕಳೆದೊಂದು ತಿಂಗಳಿನಿಂದ ದಿನನಿತ್ಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಎಲ್ಲ ದಾವೇದಾರರಿಗೆ ಅ.18ರ ಒಳಗಾಗಿ ವಾದ-ಪ್ರತಿವಾದ ಪೂರ್ಣಗೊಳಿಸುವಂತೆ ಸೂಚಿಸಿದೆ. ರಾಮಜನ್ಮಭೂಮಿ ಪ್ರಕರಣದ ತೀರ್ಪು ಸದ್ಯದಲ್ಲೇ ಪ್ರಕಟಗೊಳ್ಳುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಈಗಾಗಲೇ ಹಿಂದು ಮಂಡಳಿಗಳ ಪರ ದಾವೇದಾರರ ವಾದ ಪೂರ್ಣಗೊಂಡಿದ್ದು, ಮುಸ್ಲಿಂ ವಕ್ಪ ಮಂಡಳಿ ಪರ ಹಿರಿಯ ವಕೀಲ ರಾಜೀವ್ ಧವನ್ ವಾದ ಮಂಡಿಸುತ್ತಿದ್ದಾರೆ. ನವೆಂಬರ್ನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತಿ ಹೊಂದುತ್ತಿದ್ದಾರೆ. ಅಷ್ಟರೊಳಗೆ ತೀರ್ಪು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ, ಪೊಲೀಸರು ಮತ್ತು ಭದ್ರತಾ ಪಡೆಗಳು ಅಯೋಧ್ಯೆ ಸುತ್ತಮುತ್ತಲಿರುವ ಎಲ್ಲ ಧರ್ಮಶಾಲೆ, ಅತಿಥಿ ಗೃಹ ಹಾಗೂ ಹೋಟೆಲ್ಗಳಲ್ಲಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಹೆಚ್ಚುವರಿ 10 ಭದ್ರತಾ ಪಡೆಗಳ ತುಕಡಿಗಳನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಸದ್ಯ ನಡೆಯುತ್ತಿರುವ ದುರ್ಗಾಪೂಜೆ ಹಾಗೂ ದಸರಾ ಹಬ್ಬಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡ್ರೋನ್ಗಳ ಮೂಲಕ ಕಣ್ಗಾವಲು ವಹಿಸಲಾಗಿದೆ ಎಂದು ತಿಳಿಸಿದ್ದಾರೆ.