ಮೈಸೂರು, ಅ 7 (Daijiworld News/RD): ನಾಡಿನೆಲ್ಲೆಡೆ ದಸರಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದು, ಇನ್ನು ಇತಿಹಾಸಿಕ ಪರಂಪರೆಯ ಅರಮನೆ ನಗರಿಯಲ್ಲಿ ರಾಜ ಮನೆತನದಿಂದ ಆಯುಧ ಪೂಜೆ ನಡೆಯಿತು.
ಮಹಾರಾಜ ಯದುವಿರ್ ಕೃಷ್ಣರಾಜ ಚಾಮರಾಜ ಒಡೆಯರ್ ಅವರು ದರ್ಬಾರ್ ರಾಜಪೋಷಾಕು ಧರಿಸಿ ಕಲ್ಯಾಣ ಮಂಟಪದಲ್ಲಿ ಅರಮನೆಯ ಖಾಸಗಿ ಆಯುಧಗಳಿಗೆ ಪೂಜೆ ನೆರವೇರಿಸಿದರು. ನಂತರ ಮಹಾರಾಜರು ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ ಸಲ್ಲಿಸಿದರು. ವಾದ್ಯಘೋಷ, ಪೊಲೀಸ್ ಬ್ಯಾಂಡ್ ಸಂಗೀತದೊಂದಿಗೆ ಪೂಜಾ ಕಾರ್ಯ ನಡೆಯಿತು.
ಆಯುಧ ಪೂಜೆ ದಸರಾ ಹಬ್ಬದ ಒಂದು ಭಾಗವಾಗಿದ್ದು, ದಸರಾ ಮಹೋತ್ಸವದ ಆಕರ್ಷಣೆಯಾಗಿರುವ ಜಂಬೂ ಸವಾರಿಯು ವಿಜಯದಶಮಿಯ ದಿನವಾದ ಮಂಗಳವಾರ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಸರಾ ಮೆರವಣಿಗೆಗೆ ಚಾಲನೆ ನೀಡಲಿದ್ದು, ದಸರಾ ಜಂಬೂಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲು ಜನರು ಕಾತದಿಂದ ಕಾಯುತ್ತಿದ್ದಾರೆ. ನಾಳೆ ಮಧ್ಯಾಹ್ನ 2.15ರಿಂದ 2.58ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಯಡಿಯೂರಪ್ಪ ಅವರು ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ 4.31ರಿಂದ 4.57ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆಯ ಒಳಾವರಣದ ವಿಶೇಷ ವೇದಿಕೆಯಲ್ಲಿ ನಿಂತು, ಗಜರಾಜ ಅರ್ಜುನ ಹೊರಲಿರುವ 750ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ