ಬೆಂಗಳೂರು, ಅ.07(Daijiworld News/SS): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅ.10ರಿಂದ ರಾಜ್ಯಕ್ಕೆ ಮೂರು ದಿನಗಳ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ.
ರಾಷ್ಟ್ರಪತಿ ಪ್ರವಾಸದ ವೇಳಾಪಟ್ಟಿಯಂತೆ, ಅ.10ರಂದು ರಾಮನಾಥ್ ಕೋವಿಂದ್ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಅವರು ಅಂದು ಮೈಸೂರಿನ ಅರಮನೆಗೆ ಭೇಟಿ ನೀಡುವರು ಮತ್ತು ದಿ.ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಆಚರಣೆಗೆ ಚಾಲನೆ ನೀಡಲಿದ್ದಾರೆ.
ಅ.11ರಂದು ಬೆಳಿಗ್ಗೆ ರಾಷ್ಟ್ರಪತಿಗಳು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಮತ್ತು ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಅವರು, ವರುಣಾ ಗ್ರಾಮದಲ್ಲಿ ಜೆಎಸ್'ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಭೂಮಿ ಪೂಜೆ ಮತ್ತು ಶುಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅ.12ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಬೆಂಗಳೂರಿನ ರಾಜಭವನದಲ್ಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹಾಗೂ ಇತರೆ ನ್ಯಾಯಮೂರ್ತಿಗಳ ಜೊತೆ ಉಪಹಾರ ಕೂಟದಲ್ಲಿ ಭಾಗವಹಿಸುವರು. ಬಳಿಕ ಅವರು ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ನಿವಾಸಕ್ಕೆ ಭೇಟಿ ನೀಡುವರು. ಆ ನಂತರ ಅಹಮದಾಬಾದ್ಗೆ ತೆರಳುವ ಮುನ್ನ ರಾಷ್ಟ್ರಪತಿಗಳು ಜಿಗಣಿಯಲ್ಲಿರುವ ಯೋಗ ಅನುಸಂಧಾನ ಸಂಸ್ಥಾನ(ಎಸ್-ವ್ಯಾಸ) ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.