ಕೈವಾರ, ಅ.08(Daijiworld News/SS): ಕೇಂದ್ರದ ಸಮರ್ಪಕ ಅನುದಾನದಕ್ಕಾಗಿ ಇದೇ ತಿಂಗಳ 10 ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯಿಂದ ಫ್ರೀಡಂ ಪಾರ್ಕ್'ವರೆಗೆ ಸಾಂವಿಧಾನಿಕವಾಗಿ ಹೋರಾಟ ಮಾಡುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಎಚ್ಚರಿಸಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಸುಮಾರು 38000 ಸಾವಿರ ಕೋಟಿ ನಷ್ಟ ಉಂಟಾಗಿದ್ದರೂ, ಕೇಂದ್ರ ಸರ್ಕಾರ ಇದುವರೆಗೂ ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಈಗ ನೀಡಿರುವ 1200 ಕೋಟಿ ರೂಪಾಯಿ ಪರಿಹಾರ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಕೊಡಗು, ಶಿವಮೊಗ್ಗ ಮತ್ತಿತರ ಕಡೆ ಉಂಟಾಗಿದ್ದ ನೆರೆ ಪರಿಹಾರದ ನಷ್ಟದ ಪರಿಹಾರವೇ ಹೊರತು ಈಗಿನ 38000 ಸಾವಿರ ಕೋಟಿ ನಷ್ಟದ ಪರಿಹಾರ ನೀಡಿಲ್ಲ ಎಂದು ಹೇಳಿದರು.
ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು ಪಕ್ಷದಿಂದ ಹೊರಗೆ ಹಾಕಿದಾಗ ಕೈವಾರ ಪುಣ್ಯಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂ.ಎಸ್.ರಾಮಯ್ಯ ಅವರು ರಾಜಕೀಯ ಅಭಿವೃದ್ದಿಗೆ ಮಾಡಿದ ಆರ್ಥಿಕ ನೆರವನ್ನು ಈ ವೇಳೆ ನೆನಪಿಸಿಕೊಂಡರು.