ನವದೆಹಲಿ, ಅ 8 (Daijiworld News/RD): 87ನೇ ವಾಯುಸೇನಾ ದಿನದ ಅಂಗವಾಗಿ ದೇಶದ ವಾಯುಪಡೆಯ ಧೀರ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದರು.
ಈ ಬಗ್ಗೆ ಟ್ವೀಟ್ ಮಾಡಿದ ನರೇಂದ್ರ ಮೋದಿ, ದೇಶದಲ್ಲಿ ವಾಯುಪಡೆ ಸಮರ್ಥವಾಗಿ ಸೇವೆ ಸಲ್ಲಿಸುತ್ತಿದೆ. ವಾಯುಪಡೆ ಅತ್ಯಂತ ಸಮರ್ಪಣೆ ಹಾಗೂ ಉತ್ಕೃಷ್ಟತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತದೆ ಎಂದು ಪ್ರಧಾನಿ ಸ್ಮರಿಸಿದ್ದಾರೆ. ಜೊತೆಗೆ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ದೇಶಕ್ಕಾಗಿ ವಾಯುಸೇನೆ ಮಾಡಿರುವ ಸಾಧನೆಗಳನ್ನು ಸಾರಿದ್ದಾರೆ. ಇದೇ ವೇಳೆ ವಾಯುಸೇನಾ ಪಡೆಯ ಧೈರ್ಯ ಹಾಗೂ ಬಲವನ್ನು ಶ್ಲಾಘಿಸಿದ್ದಾರೆ.
ಜೊತೆಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಕೂಡ ವಾಯುಸೇನಾ ಪಡೆಗೆ ಶುಭಾಶಯಗಳನ್ನು ಕೋರಿದ್ದಾರೆ. ಎಲ್ಲಾ ಭಾರತೀಯ ಸೇನಾ ಸಿಬ್ಬಂದಿಗಳು ಹಾಗೂ ವಾಯುಪಡೆಯ ಕುಟುಂಬಸ್ಥರಿಗೆ ವಾಯುಸೇನಾ ದಿನದ ಶುಭಾಶಯಗಳು. ಧೈರ್ಯ, ಕಷ್ಟ ಸಹಿಷ್ಣುತೆ, ನಿರ್ಣಯ ಮತ್ತು ನಿಸ್ವಾರ್ಥ ಸೇನೆಗೆ ಐಎಎಫ್ ಉದಾಹರಣೆಯಾಗಿದೆ.