ನಾಗ್ಪುರ, ಅ 08 (Daijiworld News/MSP): ಗುಂಪು ಥಳಿತ ಅಥವಾ ಹಲ್ಲೆ ಎಂಬ ಪದ ಭಾರತೀಯ ನೀತಿಗಳಲ್ಲೇ ಇಲ್ಲ. ಭಾರತೀಯರು ಶಾಂತಿ ಮತ್ತು ಸೋದರತ್ವವವನ್ನು ನಂಬಿರುವವರು. ಇಂತಹ ಪದಗಳನ್ನು ಭಾರತೀಯರು ಹಾಗೂ ಹಿಂದೂಗಳ ಮೇಲೆ ಇಂತಹ ಹೇರಿಕೆ ಮಾಡಬೇಡಿ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಂಗಳವಾರ ಹೇಳಿದ್ದಾರೆ.
ಇವರು ಆರ್ಎಸ್ಎಸ್ ಮುಖ್ಯ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯದಶಮಿ ಕಾರ್ಯಕ್ರಮದಲ್ಲಿ ಆಯುಧ ಪೂಜೆ ಭಾಗವಹಿಸಿ ಮಾತನಾಡಿ, ಆರ್ಎಸ್ಎಸ್ ಎಂದಿಗೂ ಸಂವಿಧಾನ ವಿರೋಧ ಕೆಲಸಗಳ ಪರ ನಿಂತಿಲ್ಲ, ಬೆಂಬಲಿಸಿಲ್ಲ. ಯಾವುದೇ ಹಲ್ಲೆ ಪ್ರಕರಣಗಳಿರಲಿ ಅದರ ವಿರುದ್ಧ ಸಂಘ ಪರಿವಾರ ನಿಲುವು ಇದೆ. ಇದೇ ದಾರಿಯಲ್ಲಿ ಆರ್ಎಸ್ಎಸ್ ತನ್ನ ಕೆಲಸ ಮಾಡುತ್ತಿದೆ. ಭಾರತ ದೇಶವೂ ಎಲ್ಲಾ ಭಾರತೀಯರಿಗೆ, ಎಲ್ಲಾ ಧರ್ಮದವರಿಗೆ ಸೀಮಿತವಾಗಿದೆ. ಧರ್ಮ, ಜಾತಿ ಮೇಲೆ ಯಾರೊಬ್ಬರೂ ತಾರತಮ್ಯ ಮಾಡದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಸ್ವಯಂಸೇವಕ ಸಂಘ ಅಧಿಕಾರದಲ್ಲಿದ್ದರೆ, ಈ ಪಾಠವನ್ನು ಜಾರಿಗೆ ಬರುವಂತೆ ನೋಡಿಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.
ಭಾರತದ ಆಂತರಿಕ ಶಕ್ತಿಯೇ " ವೈವಿಧ್ಯತೆ " ಆಗಿದೆ. ಆದರೆ ಜಾತಿ, ಮತ, ಭಾಷೆ ಮತ್ತು ಪ್ರದೇಶದ ವೈವಿಧ್ಯತೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಭಾರತೀಯರ ಒಳಗೆ ಇಬ್ಭಾಗಿಸಲು, ಭಿನ್ನಾಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿವೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳು ಭಾರತ ಬಲಶಾಲಿಯಾಗಲು ಬಯಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಈ ಸಂದರ್ಭ ಮುಂದುವರಿಸಿ ಮಾತನಾಡಿದ ಭಾಗವತ್, ಎರಡನೇ ಬಾರಿ ಆಯ್ಕೆಯಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿ ರದ್ದುಗೊಳಿಸುವ ಮೂಲಕ ದೇಶದ ಜನರ ಅಶೋತ್ತರಗಳನ್ನು ಈಡೇರಿಸುವ ಧೈರ್ಯ ತನಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ. ಭಾರತದ ಗಡಿ ಭಾಗ ಹಿಂದೆಂದಿಗಿಂತಲೂ ಈಗ ಹೆಚ್ಚು ಸುರಕ್ಷಿತವಾಗಿದೆ. ಆದರೆ, ನಮ್ಮ ಜಲಗಡಿಯ ರಕ್ಷಣೆಯನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.