ಕೊಲ್ಕತ್ತಾ, ಅ 8 (Daijiworld News/RD): ಪಶ್ಚಿಮ ಬಂಗಾಳದ ದುರ್ಗಾ ಪೂಜೆಗೆ ಹೆಸರುವಾಸಿಯಾಗಿದ್ದು. 4 ವರ್ಷದ ಮುಸ್ಲಿಂ ಬಾಲಕಿಯನ್ನು ಹಿಂದೂ ದೇವಿಯಂತೆ ಶೃಂಗಾರಗೊಳಿಸಿ, ಪೂಜಿಸುವ ಮೂಲಕ ಧಾರ್ಮಿಕ ಸಾಮರಸ್ಯ ಮೆರೆದಿದ್ದಾರೆ.
4 ವರ್ಷದ ಮುಸ್ಲಿಂ ಬಾಲಕಿ ಫಾತಿಮಾಳನ್ನು ಪೂಜೆಗೆ ಸಿದ್ಧಪಡಿಸಿದ ದತ್ತ ಕುಟುಂಬದವರು ಆಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದಸರಾ ಹಬ್ಬದ ಆಚರಣೆಗಾಗಿ ಅಂಗಡಿ ಮಾಲೀಕ ಇಬ್ರಾಹಿಂ ಅವರನ್ನು ತಮಲ್ ದತ್ತ ಆಹ್ವಾನಿಸಿದ್ದರು. ತಮ್ಮ ಮನೆಗೆ ಬಂದ ಇಬ್ರಾಹಿಂ ಅವರ 4 ವರ್ಷದ ಪುತ್ರಿ ಫಾತಿಮಾಳನ್ನು ಕೆಂಪು ಉಡುಗೆ, ದೊಡ್ಡದಾದ ಬಿಂದಿ, ಆಭರಣಗಳೊಂದಿಗೆ ಶೃಂಗರಿಸಿ, ಹೂವಿನ ಮಾಲೆ ಹಾಕಿ ದತ್ತ ಕುಟುಂಬಸ್ಥರು ಪೂಜೆ ಮಾಡಿದ್ದಾರೆ. ಬಾಲಕಿ ಫಾತಿಮಾ ಜೊತೆ ಆಗಮಿಸಿದ್ದ ಆಕೆಯ ಅಪ್ಪ, ಚಿಕ್ಕಪ್ಪ, ಅಮ್ಮ ಕೂಡ ತಮಲ್ ದತ್ತ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದು, ಜಾತಿ ಮತ ಬೇಧವಿಲ್ಲದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಟ್ಟಿಗೆ ದಸರಾ ಹಬ್ಬ ಆಚರಿಸಿದ್ದಾರೆ.
ನವರಾತ್ರಿಯ ಶುಭ ದಿನದಂದು 10 ವರ್ಷದೊಳಗಿನ ಹೆಣ್ಣುಮಕ್ಕಳನ್ನು ಪೂಜಿಸಲಾಗುತ್ತದೆ. ಕೊಲ್ಕತ್ತಾದ ದತ್ತ ಕುಟುಂಬ ಈ ಬಾರಿ ಹೊಸ ಪ್ರಯೋಗ ಮಾಡಿದ್ದು, ಹಿಂದು ಹೆಣ್ಣು ಮಕ್ಕಳ ಬದಲಾಗಿ ಮುಸ್ಲಿಂ ಬಾಲಕಿಗೆ ದೇವಿಯ ವೇಷ ತೊಡಿಸುವ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಮೊದಲು ಬ್ರಾಹ್ಮಣ ಸಮುದಾಯದ ಬಾಲಕಿಯರನ್ನು ಕರೆದು ಕುಮಾರಿ ಪೂಜೆ ಮಾಡುತ್ತಿದ್ದೆವು. ನಂತರ ಬೇರೆ ಜಾತಿಯ ಬಾಲಕಿಯರನ್ನೂ ಪೂಜಿಸತೊಡಗಿದೆವು. ಈ ಬಾರಿಯೇಕೆ ಮುಸ್ಲಿಂ ಬಾಲಕಿಯನ್ನು ಕರೆಯಬಾರದು ಎಂದುಕೊಂಡು ಈ ನಿರ್ಧಾರ ತೆಗೆದುಕೊಂಡೆವು. ಆಕೆಗೆ ದೇವಿಯಂತೆ ಅಲಂಕಾರ ಮಾಡಿ ಪೂಜಿಸಿದೆವು. ಮಕ್ಕಳೆಂದರೆ ಎಲ್ಲರೂ ಒಂದೇ. ನಾವು ಅವರನ್ನು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ' ಎಂದು ಹೇಳಿದ್ದಾರೆ. ಈ ದೇಶದಲ್ಲಿ ಎಲ್ಲ ಧರ್ಮದವರಿಗೂ ಸಮಾನ ಹಕ್ಕುಗಳಿವೆ. ಹಿಂದು, ಕ್ರೈಸ್ತ, ಮುಸ್ಲಿ, ಸಿಖ್ ಎಲ್ಲರಲ್ಲೂ ದೇವರನ್ನು ಕಾಣಲು ಸಾಧ್ಯವಿದೆ. ಈ ಕಾರ್ಯ ಹಲವರಿಗೆ ಮಾದರಿಯಾಗಿ ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ನಿರ್ಮಾಣವಾಗಬೇಕು ಎಂದು ತಮಲ್ ದತ್ತ ಹೇಳಿದ್ದಾರೆ.
ನಮ್ಮ ದುರ್ಗಾ ದೇವಿಗೆ ಯಾವುದೇ ಜಾತಿ, ಮತ, ಧರ್ಮಗಳ ಬೇಧವಿಲ್ಲ. ಮತ್ತು ಮಗುವಿನಲ್ಲಿ ದೇವರನ್ನು ಕಾಣುವ ನಾವು ಮಕ್ಕಳನ್ನು ಪೂಜಿಸುತ್ತೇವೆ. ಎಂದು ದತ್ತಾ ಅವರ ಪತ್ನಿ ಅಭಿಪ್ರಾಯಪಟ್ಟರು.