ತಮಿಳುನಾಡು, ಅ 08 (Daijiworld News/MSP): ಸೆಲ್ಫಿಗೆ ಪೋಸ್ ನೀಡಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಂಬಾರು ಅಣೆಕಟ್ಟಿನ ಬಳಿ ನಡೆದಿದೆ.
ಮೃತಪಟ್ಟವರನ್ನು ತಮಿಳುನಾಡಿನ ಕೃಷ್ಣಗಿರಿ ತಾಲೂಕಿನ ಉತ್ತಂಗಿರೈ ಬಳಿಯ ಒಟ್ಟಪಟ್ಟಿ ಗ್ರಾಮದ ಸಂತೋಷ್ (14), ಸ್ನೇಹ (19), ಕಣ್ಣಿಗ (18), ಹಾಗೂ ನಿವೇದ (20) ಎಂದು ಗುರುತಿಸಲಾಗಿದೆ.
ನಿವೇದ ಸೆಪ್ಟೆಂಬರ್ ತಿಂಗಳಲ್ಲಿ ಕೃಷ್ಣಗಿರಿನ ಬಾರ್ಗೂರ್ನ ಪೆರುಮಾಲ್ಸಾಮಿ (24) ಎಂಬವರನ್ನು ವಿವಾಹವಾಗಿದ್ದರು. ನವದಂಪತಿಗಳು ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ಸಂದರ್ಭ ಮರಂಪಟ್ಟಿ ಗ್ರಾಮದಲ್ಲಿರುವ ಪಂಬಾರು ಜಲಾಶಯಕ್ಕೆ 9 ನೇ ತರಗತಿ ಅಭ್ಯಾಸಿಸುತ್ತಿದ್ದ ಸಂತೋಷ್ ಹಾಗೂ ಸ್ನೇಹ, ಕಣ್ಣಿಗ, ಹಾಗೂ ಯುವರಾಣಿ ಎಂಬ ಸಂಬಂಧಿಕರೊಂದಿಗೆ ನವದಂಪತಿ ಭೇಟಿ ನೀಡಿದ್ದಾರೆ. ಇವರೆಲ್ಲರೂ ಜಲಾಶಯದ ಬಳಿ ಸೆಲ್ಫಿಗೆ ಪೋಸ್ ನೀಡುವ ಸಂದರ್ಭ ಬಾಲಕ ಸಂತೋಷ್ ತನ್ನ ಸಮತೋಲನವನ್ನು ಕಳೆದುಕೊಂಡು ನೀರಿಗೆ ಬೀಳುವ ವೇಳೆ ತನ್ನ ಸಹೋದರಿಯರನ್ನು ಸಮತೋಲನಕ್ಕಾಗಿ ಹಿಡಿದುಕೊಂಡಿದ್ದಾನೆ. ಈ ಸಂದರ್ಭ ಎಲ್ಲರೂ ಕೆಳಕ್ಕೆ ಎಳೆಯಲ್ಪಟ್ಟು ನೀರು ಪಾಲಾಗಿದ್ದಾರೆ. ಈ ವೇಳೆ ಸಂಬಂಧಿಯೊಬ್ಬ ಯುವರಾಣಿಯನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ಈ ಹಿಂದೆಯೂ ಇದೇ ತೆರನಾಗಿ ಇದೇ ಜಾಗದಲ್ಲಿ 19 ಜನ ಮುಳುಗಿ ಸಾವನ್ನಪ್ಪಿದ್ದ ಘಟನೆ ನಡೆದಿದ್ದರೂ, ಕೃಷ್ಣಗಿರಿ ಜಿಲ್ಲಾಡಳಿತ ಮಾತ್ರ ಅಪಾಯದ ಕುರಿತು ಎಚ್ಚರಿಕೆಯ ಸೂಚನಾ ಫಲಕಗಳನ್ನಾಗಲಿ, ಸುರಕ್ಷತೆಗಾಗಿ ಬೇಲಿಗಳನ್ನಾಗಲಿ ಹಾಕದಿರುವುದು ಸುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ಇದು ಕಾರಣವಾಗಿದೆ.