ಅಬುದಾಭಿ, ಅ 08 (Daijiworld News/MSP): ಅಬುಧಾಬಿ ಏರ್ಪೋರ್ಟ್ ನಲ್ಲಿ ಭಾರತೀಯ ಮೂಲದ 124 ವರ್ಷ ಹಿರಿಯ ಪ್ರಯಾಣಿಕನನ್ನು ಕಂಡು ವಿಮಾನ ನಿಲ್ದಾಣದ ಅಧಿಕಾರಿಗಳೇ ಆಶ್ಚರ್ಯಗೊಂಡಿದ್ದಾರೆ ಮಾತ್ರವಲ್ಲದೆ, ಜಗತ್ತಿನ ಹಿರಿಯ ಜೀವವನ್ನು ಕಂಡು ವಿಮಾನ ನಿಲ್ದಾಣದ ಅಧಿಕಾರಿಗಳೆಲ್ಲ ಸೇರಿ ಗೌರವಿಸಿ ಸಂಭ್ರಮದಿಂದ ಕಳುಹಿಸಿಕೊಟ್ಟಿದ್ದಾರೆ.
ಈಗಲೂ ಯಾರ ಸಹಾಯವಿಲ್ಲದೆ ಏಕಾಂಗಿಯಾಗಿ ಪ್ರಯಾಣಿಸುವ ಗಿನ್ನಿಸ್ ದಾಖಲೆಗೆ ಸೇರಿದ 124ನೇ ವಯಸ್ಸಿನಲ್ಲೂ ಫುಲ್ ಫಿಟ್ ಆಗಿರುವ ಸ್ವಾಮಿ ಶಿವಾನಂದ ಅವರು ಮೂಲತಃ ವಾರಣಾಸಿಯವರು.
ಇವರ ದೀರ್ಘಾಯುಷ್ಯದ ಗುಟ್ಟೇನು ?
ಪಾಸ್ಪೋರ್ಟ್ ಪ್ರಕಾರ ಸ್ವಾಮಿ ಶಿವಾನಂದ ಜನಿಸಿದ್ದು, 1896 ಆಗಸ್ಟ್ 8ರಲ್ಲಿ. ನಿಮ್ಮ ದೀರ್ಘಾಯುಷ್ಯದ ಗುಟ್ಟೇನು? ಅಂದ್ರೆ ಪ್ರಶ್ನಿಸಿದ್ರೆ ಅವರು ಹೇಳುವ ಉತ್ತರ ಇಷ್ಟೇ, ನೋ ಸೆಕ್ಸ್, ನೋ ಸ್ಪೈಸ್, ಪ್ರತಿದಿನ ಯೋಗ.! ಹೌದು ಇದೇ ಕಾರಣಕ್ಕೆ 124 ನೇ ವಯಸ್ಸಿನಲ್ಲಿಯೂ ಸಹ ಅವರು ದಿನದಲ್ಲಿ ಗಂಟೆಗೂ ಹೆಚ್ಚು ಕಾಲ ಯೋಗವನ್ನು ನಿರ್ವಹಿಸಲು ಸಮರ್ಥರಾಗಿದ್ದಾರೆ.
ಕೇವಲ ಬೇಯಿಸಿದ ಆಹಾರವಷ್ಟೇ ಸೇವಿಸುವ ಇವರ ಆಹಾರ ಕೂಡಾ ತುಂಬಾ ಸರಳ. ಅನ್ನ, ದಾಲ್ ಜೊತೆಗೆ ಒಂದೆರಡು ಹಸಿಮೆಣಸು ಇಂದಿಗೂ ಇವರ ಆಹಾರ. ಇನ್ನು ಇವರು ಸಾಂಬಾರು, ಎಣ್ಣೆ ಪದಾರ್ಥಗಳನ್ನು ಸೇವಿಸೋದಿಲ್ಲ. ಬಡತನದ ಕಾರಣದಿಂದಾಗಿ ಅವರು ಬಾಲ್ಯದಲ್ಲಿ ಹಲವಾರು ದಿನಗಳವರೆಗೆ ಆಹಾರವಿಲ್ಲದೆ ಇರಲು ಒಗ್ಗಿಕೊಂಡಿದ್ದರು. ಜೊತೆಗೆ ಅನ್ನ, ದಾಲ್ ಮಾತ್ರ ಆಹಾರವಾಗಿತ್ತು. ಇಂದಿಗೂ ಇದೇ ಆಹಾರ ಕ್ರಮ ಅನುಸರಿಸುತ್ತಿದ್ದೇನೆ. ನನ್ನ ಪ್ರಕಾರ ಹಾಲು ಮತ್ತು ಹಣ್ಣು ವೈಭೋಗದ ವಸ್ತುಗಳು ಅನಿಸುವುದರಿಂದ ಇದನ್ನು ಸೇವಿಸೋದಿಲ್ಲ ಎನ್ನುತ್ತಾರೆ ಸ್ವಾಮಿ ಶಿವಾನಂದ.
ಶಿವಾನಂದ ಅವರ ಹುಟ್ಟಿದ ದಿನ ದೃಢೀಕರಣಕ್ಕೆ ಈಗ ಇರುವ ದಾಖಲೆ ಪಾಸ್ಪೋರ್ಟ್. ಈ ಪಾಸ್ಪೋರ್ಟ್ಗೆ ಆಧಾರವಾಗಿದ್ದು ದೇವಸ್ಥಾನವೊಂದರ ರಿಜಿಸ್ಟರ್ಡ್. ಆರರ ವಯಸ್ಸಿನಲ್ಲಿಯೇ ಅಪ್ಪ-ಅಮ್ಮನನ್ನು ಕಳೆದುಕೊಂಡ ಅವರನ್ನು ಸಂಬಂಧಿಕರು ಒಬ್ಬ ಧಾರ್ಮಿಕ ಗುರುವಿನ ಕೈಗೆ ಒಪ್ಪಿಸಿದ್ದರು. ಅಲ್ಲಿಂದ ಇಲ್ಲಿನವರೆಗೂ ಯೋಗ, ಶಿಸ್ತು ಮತ್ತು ಕಠಿಣ ಬ್ರಹ್ಮಚರ್ಯ ಪಾಲಿಸಿಕೊಂಡುಬರುತ್ತಿದ್ದಾರೆ. ಐದು ಅಡಿ ಎರಡು ಇಂಚು ಎತ್ತರದ ಶಿವಾನಂದ ಅವರು ದಿನಕ್ಕೆ ಎರಡು ಗಂಟೆಗೂ ಹೆಚ್ಚು ಕಾಲ ಯೋಗ ಮಾಡ್ತಾರೆ. ಬರೀ ಚಾಪೆ ಮೇಲೆ ಮಲಗುವ ಸ್ವಾಮಿ ತಲೆಯಡಿಗೆ ಮರದ ತುಂಡು ಇಟ್ಟುಕೊಳ್ಳುತ್ತಾರೆ.
ನಾವು ಜೀವನದ ಸುಖಗಳನ್ನು ತ್ಯಜಿಸಿದರೆ, ಸುದೀರ್ಘ, ಆರೋಗ್ಯಕರ ಜೀವನವನ್ನು ಆನಂದಿಸಬಹುದು ಎನ್ನುವುದು ಶಿವಾನಂದ ಅವರ ಬದುಕಿನ ನೀತಿಯಾಗಿದೆ.