ಬೆಂಗಳೂರು, ಅ.09(Daijiworld News/SS): ಉತ್ಪಾದಕರು ಮತ್ತು ಬಳಕೆದಾರರ ನಡುವಿನ ಅಂತರ ಕಡಿಮೆ ಆಗಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದ ಹಾಗೇ ಇದನ್ನು ಮೇಲೆತ್ತಬೇಕು ಎಂದು ವಿಧಾನಸಭಾ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಮುಖಂಡ ಆರ್. ರಮೇಶ್ ಕುಮಾರ್ ಹೇಳಿದ್ದಾರೆ.
ಆರ್ಥಿಕ ಕ್ಷೇತ್ರದಲ್ಲಿ ಪಾವಿತ್ರ್ಯತೆ ಬೇಕು. ಹಾಗಂತ ಅದು ಮತ್ತೆ ಮಡಿವಂತಿಕೆ ಆಗಬಾರದು. ಜನಪರ ಆರ್ಥಿಕತೆ ಆಗಬೇಕಾಗಿದೆ. ಉತ್ಪಾದಕರು ಮತ್ತು ಬಳಕೆದಾರರ ನಡುವಿನ ಅಂತರ ಕಡಿಮೆ ಆಗಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದ ಹಾಗೇ ಇದನ್ನು ಮೇಲೆತ್ತಬೇಕು. ಜನಪರ ಅರ್ಥ ವ್ಯವಸ್ಥೆ ಹಾಳಾಗಿ ಹೋಗಿರುವ ಕಾರಣದಿಂದ ಪವಿತ್ರ ಆರ್ಥಿಕತೆಗಾಗಿ ಚಳವಳಿ ಆರಂಭಿಸಬೇಕಾಗಿದೆ. ತಾವಂತೂ ಈ ಚಳವಳಿಗೆ ಕಾಯಾ ವಾಚಾ ಮನಸಾ ಜೊತೆಗಿದ್ದೇನೆ ಎಂದು ಹೇಳಿದರು.
ಇದೇ ವಿಚಾರವಾಗಿ ಮಾತನಾಡಿದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಗೋಪಾಲ ಗೌಡ, ಮಾನವ ಹಕ್ಕುಗಳು ಮತ್ತು ಮನುಷ್ಯರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಎರಡೂ ಸರಕಾರಗಳು ಸೋತಿವೆ. ಬಡತನ, ನಿರುದ್ಯೋಗ, ಅನಾರೋಗ್ಯ, ಪರಿಸರ ಹಾನಿ, ಸಂಪೂರ್ಣ ಕೆಳಗಿಳಿದ ದೇಶದ ಜಿಡಿಪಿ, ರೈತರ ಸರಣಿ ಆತ್ಮಹತ್ಯೆಗಳು, ಪ್ರಕೃತಿ ವಿಕೋಪಕ್ಕೊಳಗಾದ ಜಿಲ್ಲೆ ಹಾಗೂ ಜನರಿಗೆ ಇನ್ನೂ ತಲುಪದ ಪರಿಹಾರ ದಾರಿಗಳು ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಸರಕಾರಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.