ನವದೆಹಲಿ, ಅ.09(Daijiworld News/SS): ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಪುಲ್ವಾಮಾದಂತಹ ಮತ್ತೊಂದು ದಾಳಿಯನ್ನು ಭಾರತದ ಮೇಲೆ ನಡೆಸಲು ಪಾಕಿಸ್ತಾನ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಭಯೋತ್ಪಾದಕರ ಒಳನುಸುಳಿಸುವ ಪ್ರಕ್ರಿಯೆಲ್ಲಿ ಪಾಕಿಸ್ತಾನ ನಿರತವಾಗಿದ್ದು, ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕನಿಷ್ಠ 20 ಭಯೋತ್ಪಾದಕ ಶಿಬಿರಗಳು ಹಾಗೂ ಮತ್ತೊಂದು 20 ಉಡಾವಣಾ ಪ್ಯಾಡ್'ಗಳನ್ನು ಸಕ್ರಿಯಗೊಳಿಸಿದೆ. ಪ್ರತಿಯೊಂದು ಉಗ್ರರ ತರಬೇತಿ ಶಿಬಿರ ಹಾಗೂ ಉಡಾವಣಾ ಪ್ಯಾಡ್'ಗಳಲ್ಲಿ ಕನಿಷ್ಠ 50 ಉಗ್ರರು ಕಾರ್ಯನಿರತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಲ್ವಾಮಾದಂತಹ ಮತ್ತೊಂದು ದಾಳಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಏಜೆನ್ಸಿಗಳು ಅನೇಕ ಉಗ್ರರನ್ನು ಜಮ್ಮು-ಕಾಶ್ಮೀರದೊಳಗೆ ನುಸುಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಎಲ್ ಒಸಿ ಮೂಲಕ ಎಷ್ಟು ಸಾಧ್ಯವೋ ಅಷ್ಟು ಉಗ್ರರನ್ನು ಒಳನುಸುಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಜಮ್ಮು- ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದು, ಉಗ್ರರು ದೇಶದೊಳಗೆ ನುಸುಳಿದ್ದು, ಜಮ್ಮು-ಕಾಶ್ಮೀರದಲ್ಲಿ 200 ರಿಂದ 300 ಉಗ್ರರು ಕಾರ್ಯ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ.