ಬೆಂಗಳೂರು, ಅ.09(Daijiworld News/SS): ಮತ್ತೆ ಮೂರು ದಿನಗಳ ಕಾಲ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಅಕ್ಟೋಬರ್ 12ರವೆರಗೂ ಮಳೆ ಮುಂದುವರೆಯಲಿದೆ ಎಂದು ಹೇಳಲಾಗಿದೆ. ಕಳೆದೊಂದು ವಾರದಿಂದ ಆಗಾಗ ಪ್ರತ್ಯಕ್ಷನಾಗಿ ಆರ್ಭಟಿಸುವ ಮಳೆರಾಯ ಇನ್ನೂ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವರ್ಷಧಾರೆ ಸುರಿಸಲಿದ್ದಾನೆ.
ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆ ಸ್ವಲ್ಪ ನಿಂತಿದ್ದು, ಇದೀಗ ಉತ್ತರ ಕರ್ನಾಟಕ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಒಟ್ಟು 23 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ತೆಲಂಗಾಣದಲ್ಲಿ ಸೈಕ್ಲೋನ್ ಸಕ್ರ್ಯೂಲೇಷನ್ ಇರುವುದರಿಂದ ಹಾಗೂ ಕೇರಳದ ಕಡಿಮೆ ಒತ್ತಡ ರೇಖೆ ತನ್ನ ದಿಕ್ಕು ಬದಲಿಸುತ್ತಿರುವುದರಿಂದ ಮಳೆ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಮಂಗಳವಾರವೂ ಮಳೆಯ ಆರ್ಭಟ ಮುಂದುವರಿದ ಪರಿಣಾಮ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಇದರಿಂದ ನವರಾತ್ರಿ ಉತ್ಸವ ಆಚರಣೆಗೂ ಅಡ್ಡಿಯಾಗಿತ್ತು. ಈ ನಡುವೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಅ. 9ರಿಂದ 12ರವರೆಗೆ ನಗರದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಿದೆ.