ಪುಣೆ, ಅ 09 (Daijiworld News/MSP): ಪುಣೆಯ ದಂಪತಿಗಳು ಜೊಮ್ಯಾಟೋ ಡೆಲಿವರಿ ಬಾಯ್ ವಿರುದ್ಧ ನಾಯಿ ಮರಿಯನ್ನು ಕಿಡ್ನಾಪ್ ಮಾಡಿರುವ ಆರೋಪ ಹೊರಿಸಿದ್ದಾರೆ. ನಾಯಿ ಮರಿ ಕಿಡ್ನಾಪ್ ವಿಚಾರ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಪುಣೆಯ ಕಾರ್ವೆ ರಸ್ತೆ ಸನಿಹ ವಾಸವಾಗಿದ್ದ ವಂದನಾ ಶಾ ದಂಪತಿಗಳು ಜೊಮ್ಯಾಟೋದಲ್ಲಿ ಆಹಾರ ಆರ್ಡರ್ ಮಾಡಿದ್ದರು. ಈ ವೇಳೆ ಡೆಲಿವರಿ ಬಾಯ್ ತುಷಾರ್ ಫುಡ್ ಡೆಲಿವರಿ ಮಾಡಿದ್ದ. ಇಷ್ಟೇ ವಿಚಾರ ಆಗಿದ್ರೆ ಸುದ್ದಿಯಾಗುತ್ತಿರಲಿಲ್ಲ. ಆದ್ರೆ ತುಷಾರ್ ಬಂದ ಕೆಲಸ ಮಾಡಿ, ಹೊರಡುವಾಗ ಮನೆಯ ಒಳಭಾಗದಲ್ಲಿ ಆಟವಾಡುತ್ತಿದ್ದ, ವಂದನಾ ಶಾ ಸಾಕಿದ್ದ ದತ್ತು ಹೆಸರಿನ ನಾಯಿ ಮರಿಯನ್ನು ಕದ್ದೊಯ್ದಿದ್ದ.
ಆದ್ರೆ ಆ ಬಳಿಕ ದಂಪತಿಗಳು ನಾಯಿಮರಿಗಾಗಿ ಹುಡುಕಾಡಿದ್ದಾರೆ, ಎಲ್ಲೂ ಹುಡುಕಾಡಿದರೂ ದತ್ತು ಕಾಣಿಸದಾಗ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ತುಷಾರ್ ನಾಯಿ ಮರಿಯನ್ನು ಕದ್ದೊಯ್ದ ವಿಚಾರ ಬಯಲಾಗಿದೆ.
ತಮ್ಮ ಮನೆಯ ಸಮೀಪ ಆಹಾರ ವಿತರಣಾ ಹುಡುಗರನ್ನು ವಿಚಾರಿಸಿದಾಗ, ಅವರಲ್ಲಿ ಒಬ್ಬ ನಾಯಿಯನ್ನು ಗುರುತಿಸಿ ಇದು ತನ್ನ ಸಹೋದ್ಯೋಗಿ ತೆಗೆದುಕೊಂಡು ಹೋಗಿರುವುದನ್ನು ಖಚಿತಪಡಿಸಿದ್ದಾನೆ.
ವಂದನಾ ಶಾ ಈ ಬಗ್ಗೆ ಜೊಮ್ಯಾಟೋಗೆ ದೂರು ನೀಡಿದ್ದಾರೆ. ಈ ಸಂದರ್ಭ ಜೊಮ್ಯಾಟೋ ಕೂಡಾ ಪ್ರತಿಕ್ರಿಯೆ ನೀಡಿ, " ಈ ರೀತಿ ವರ್ತಿಸಿರುವುದು ಸ್ವೀಕಾರಾರ್ಹವಲ್ಲ. ದಯವಿಟ್ಟು ನಿಮ್ಮನ್ನು ಸಂಪರ್ಕಿಸುವ ವಿವರಗಳನ್ನು ನೀಡಿ, ನಮ್ಮ ತಂಡ ನಿಮಗೆ ಸಹಾಯ ಮಾಡುತ್ತದೆ" ಎಂದಿದೆ.
ಮಹಿಳೆ ತುಷಾರ್ ಬಳಿ ಕೇಳಿದಾಗ ಆತ ಈ ವಿಚಾರವನ್ನು ಒಪ್ಪಿಕೊಂಡಿದ್ದಾನೆ. ನಾಯಿ ಮರಿ ಇಷ್ಟವಾಗಿದೆ. ನಾನು ಅದನ್ನು ವಾಪಾಸು ಕೊಡುವುದಿಲ್ಲ. ಅದನ್ನು ತನ್ನೂರಿಗೆ ಕಳುಹಿಸಿರುವುದಾಗಿ ಹೇಳಿದ್ದಾನೆ. ಅಲ್ಲದೆ ಬೇಕಿದ್ದರೆ ದುಡ್ಡು ಪಡೆದುಕೊಳ್ಳಿ ಎಂದು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ.
ಇದರಿಂದ ಸಿಟ್ಟಾದ ವಂದನಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಪೊಲೀಸರಿಂದ ಸಹಾಯದ ಭರವಸೆ ನೀಡಲಾಗಿದ್ದರೂ, ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಶಾ ಮತ್ತು ಅವರ ಪತಿ ಹೇಳಿದ್ದಾರೆ.