ನವದೆಹಲಿ, ಅ.09(Daijiworld News/SS): ಸ್ಟೇಟ್ ಬ್ಯಾಂಕಿನ ಒಂದು ವರ್ಷದ ಎಂಸಿಎಲ್ಆರ್ ಶೇಕಡಾ 8.15ರಿಂದ ಶೇಕಡಾ 8.05ಕ್ಕೆ ಇಳಿಕೆಯಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎಂಸಿಎಲ್ಆರ್ ಇಳಿಕೆಯಾಗುತ್ತಿರುವುದು ಇದು ಆರನೇ ಸಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್'ಗಳಷ್ಟು ಇಳಿಕೆ ಮಾಡಿದ ನಂತರ ಸ್ಟೇಟ್ ಬ್ಯಾಂಕ್'ನಿಂದ ಈ ಪ್ರಕಟಣೆ ಹೊರಬಿದ್ದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದೆ. ಎಂಸಿಎಲ್ ಆರ್ ದರವನ್ನು 10 ಬೇಸಿಸ್ ಪಾಯಿಂಟ್'ಗಳಷ್ಟು ಇಳಿಕೆ ಮಾಡಿರುವ ಎಸ್'ಬಿಐ ನಾಳೆಯಿಂದ ಜಾರಿಗೆ ಬರಲಿದೆ. ಎಂಸಿಎಲ್ ಆರ್ ದರ ಶೇಕಡಾ 8.05ಕ್ಕೆ ಇಳಿಕೆಯಾಗಲಿದೆ. ಇದರಿಂದಾಗಿ ಈಗಾಗಲೇ ಬ್ಯಾಂಕಿನಿಂದ ಗೃಹಸಾಲ ಮತ್ತು ಇತರ ಚಿಲ್ಲರೆ ಸಾಲ ಪಡೆದುಕೊಂಡಿರುವವರಿಗೆ ಅಗ್ಗವಾಗಲಿದೆ.
ಎಲ್ಲಾ ವರ್ಗದ ಗ್ರಾಹಕರಿಗೆ ಅನುಕೂಲವಾಗಲು ಎಸ್'ಬಿಐ ಎಂಸಿಎಲ್ಆರ್ ದರವನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿದೆ ಎಂದು ಬ್ಯಾಂಕ್'ನ ಹೇಳಿಕೆ ಇಂದು ತಿಳಿಸಿದೆ.