ಪುರಿ,ಅ 09 (Daijiworld News/MSP): ತಮ್ಮ ಜಮೀನಿನಿಂದ ಮನೆಗೆ ಮರಳುತ್ತಿದ್ದಾಗ ನಾಲ್ಕು ವರ್ಷದ ಪುಟ್ಟ ತಮ್ಮ ರಾಘವ್ ಮೇಲೆ ಚಿರತೆ ಎರಗಿದಾಗ ಎದೆಗುಂದದೆ, ಚಿರತೆಯೊಂದಿಗೆ ಸೆಣಸಾಡಿ ತಮ್ಮನನ್ನು ರಕ್ಷಿಸಿದ ಹನ್ನೊಂದು ವರ್ಷದ ಬಾಲಕಿ ರಾಖಿ ಇದೀಗ ತನ್ನ ಪ್ರಾಣಕ್ಕಾಗಿ ದೆಹಲಿಯ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ.
ಈ ಘಟನೆ ಅಕ್ಟೋಬರ್ 4 ರಂದು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ದೇವ್ ಕುಂಡೈ ಟಾಲ್ಲಿ ಗ್ರಾಮದಲ್ಲಿ ನಡೆದಿದ್ದು, ಇಡೀ ದೇಶವೇ ಆಕೆಯ ಸಾಹಸವನ್ನು ಕೊಂಡಾಡುತ್ತಿದೆ. ಆಕೆಯ ಧೈರ್ಯಕ್ಕೆ ಇದೀಗ ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರಕ್ಕೆ ಸಾಹಸ ಪ್ರಶಸ್ತ್ರಿಗಾಗಿ ಆಕೆಯ ಹೆಸರನ್ನು ಶಿಫಾರಸು ಮಾಡಲು ನಿರ್ಧರಿಸಿದೆ.
ಸಂಜೆ ವೇಳೇ ರಾಖಿ ಮತ್ತು ಆಕೆಯ ಸಹೋದರ ತಮ್ಮ ಜಮೀನಿನಿಂದ ಮನೆಗೆ ಮರಳುತ್ತಿದ್ದಾಗ ಚಿರತೆ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಜಿಲ್ಳಾಧಿಕಾರಿಪೌರಿ ಧಿರಜ್ ಸಿಂಗ್ ಗಾರ್ಬಿಯಲ್ ಹೇಳಿದ್ದಾರೆ.
“ಚಿರತೆ ದಾಳಿ ನಡೆಸಿದ ತಕ್ಷಣ ರಾಖಿ ತನ್ನ ಸಹೋದರ ರಾಘವ್ ಗೆ ಅಡ್ಡಲಾಗಿ ನಿಂತು, ತನ್ನ ದೇಹವನ್ನೇ ಗುರಾಣಿಯಂತೆ ಬಳಸಿಕೊಂಡಳು. ಮಾತ್ರವಲ್ಲದೆ ಚಿರತೆ ಮೇಲೆ ಆಕ್ರಮಣ ಮಾಡುತ್ತಲೇ , ಸಹೋದರನನ್ನು ರಕ್ಷಿಸಿ ಜೋರಾಗಿ ಕೂಗಿಕೊಂಡಿದ್ದಾಳೆ. ಈ ವೇಳೆ ಗ್ರಾಮಸ್ಥರು ಒಟ್ಟಾಗಿ ಬಂದ ಪರಿಣಾಮ ಚಿರತೆ ಮಗುವನ್ನು ಬಿಟ್ಟು ಅಲ್ಲಿಂದ ಓಡಿಹೋಗಿದೆ " ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ಬಾಲಕ ರಾಘವ್ ಗೆ ಹಾಗೂ ರಾಖಿ ತಲೆ ಮತ್ತು ತೋಳುಗಳಿಗೆ ತೀವ್ರ ಗಾಯಗಳಾಗಿವೆ. ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ವೈದ್ಯರು ದೆಹಲಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಬಳಿಕ ಬಾಲಕಿಯನ್ನು ದೆಹಲಿ ಸರಕಾರಿ ಆಸ್ಪತ್ರೆಗೆ ಕರೆತಂದಾಗ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಕೊನೆಗೆ ಉತ್ತರಾಖಂಡ್ ಪ್ರವಾಸೋದ್ಯಮ ಸಚಿವ, ಸತ್ಪಾಲ್ ಮಹಾರಾಜ್ ಮಧ್ಯಪ್ರವೇಶಿಸುವ ಮೂಲಕ ಅಕ್ಟೋಬರ್ 7ರಂದು ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆಯ ನಂತರ ಬಾಲಕಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.
"ನವರಾತ್ರಿಯ ದಿನ ಬಾಲಕಿ ನಿಜಕ್ಕೂ ದುರ್ಗಾ ಮಾತೆಯ ಚೈತನ್ಯದಂತೆ ಹೋರಾಡಿದ್ದಾಳೆ. ಅವಳ ಧೈರ್ಯಕ್ಕಾಗಿ, ರಾಜ್ಯ ಸರ್ಕಾರವು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಕೇಂದ್ರ ಸಾಹಸ ಪ್ರಶಸ್ತಿಗೆ ಶಿಫಾರಸು ಮಾಡುತ್ತದೆ ”ಎಂದು ಸಚಿವ ಸತ್ಪಾಲ್ ಮಹಾರಾಜ್ ಹೇಳಿದ್ದಾರೆ. ಮಾತ್ರವಲ್ಲದೆ ಆಕೆಯ ಚಿಕಿತ್ಸೆಗಾಗಿ ಒಂದು ಲಕ್ಷ ಸಹಾಯಧನ ನೀಡಿದ್ದಾರೆ.