ಉತ್ತರಪ್ರದೇಶ, ಅ 09 (Daijiworld News/MSP): ಠಾಣೆಯಲ್ಲಿ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದ ಉತ್ತರ ಪ್ರದೇಶದ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರ ತಲೆ ಮೇಲೆ ಹತ್ತಿ ಕೋತಿಯೊಂದು ತಲೆಯಲ್ಲಿ ಕೈ ಆಡಿಸಿ ಹೇನಿಗಾಗಿ ಹುಡುಕಾಡಿದ ಪ್ರಸಂಗ ನಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ.
ಪಿಲಿಭಿತ್ ಪೊಲೀಸ್ ಠಾಣೆಗೆ ಧಿಡೀರ್ ಪ್ರವೇಶಿದ ಕೋತಿ ಮೊದಲು ಮಹಿಳಾ ಪೇದೆಯ ಕಾಲು ಹಿಡಿದಿದೆ. ಈ ವೇಳೆ ಪೇದೆ ಕಿರುಚಿಕೊಂಡಾಗ ಆಕೆಯ ಕಾಲಿಗೆ ಕಚ್ಚಿ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್ಪೆಕ್ಟರ್ ಶ್ರೀಕಾಂತ್ ದ್ವಿವೇದಿ ಅವರ ಮೇಲೆ ಕುಳಿತಿದೆ. ಇವರು ಶಾಂತರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಾ, " ಕೆಳಗೆ ಇಳಿಯೋ , ನನಗೆ ಹೋಗಬೇಕು, ಕೇಳೋ ಅಣ್ಣ ಕೆಳಗೆ ಇಳಿ" ಎನ್ನುತ್ತಾ ಕೋತಿಯೊಂದಿಗೆ ಮಾತನಾಡುತ್ತಲೆ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.
ಅತ್ತ ಕೋತಿಯೂ ಭುಜ ಮೇಲೆ ಕುಳಿತು ತಲೆಯಲ್ಲಿ ಹೇನು ಹುಡುಕಲಾರಂಭಿಸಿದೆ. ಆ ಬಳಿಕ ಹೇಗೋ ಬಾಳೇಹಣ್ಣು ನೀಡಿ ಕೋತಿಯನ್ನು ಭುಜದಿಂದ ಇಳಿಯುವಂತೆ ಮಾಡಲಾಗಿದೆಯಂತೆ.
"ನಿಮಗೆ ಕೆಲಸದ ಸಮಯದಲ್ಲಿ ಒತ್ತಡ ಬೇಡವಾದರೆ, ರೀಥಾ, ಶೀಗೆಕೈ ಇನ್ನಿತ ಉತ್ತಮ ಶಾಂಪೂ ಬಳಸಿ " ಎಂಬ ಅಡಿಬರಹದೊಂದಿಗೆ, ಈ ವಿಡಿಯೋವನ್ನು ಪೊಲೀಸ್ ಉಪ ಆಯುಕ್ತ ರಾಹುಲ್ ಶ್ರೀವಾತ್ಸವ್ ಟ್ವೀಟ್ ಮಾಡಿದ್ದಾರೆ. ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆಯೇ 16 ಸಾವಿರ ವ್ಯೂವ್ಸ್ ಬಂದಿದೆ. ಅಲ್ಲದೆ ಒಂದೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 30ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ.
ಅದರಲ್ಲಿ ನೆಟ್ಟಿಗರೋರ್ವರು, ಮಂಗ ಬಹುಶಃ ಇನ್ಸ್ಪೆಕ್ಟರ್ ಅವರ ಒಳ್ಳೆಯ ಸ್ನೇಹಿತನಾಗಿರಬೇಕು ಎಂದು ಹೇಳಿದರೆ, ಮತ್ತೊರ್ವ ಮಂಗನಿಂದ ಉಚಿತ ಸೇವೆ ಎಂದು ಹಾಸ್ಯಭರಿತವಾಗಿ ಕಮೆಂಟ್ ಮಾಡಿದ್ದಾರೆ