ಬೆಂಗಳೂರು, ಅ 09 (DaijiworldNews/SM): ಅಕ್ಟೋಬರ್ 10ರ ಗುರುವಾರದಿಂದ ರಾಜ್ಯ ವಿಧಾನಸಭೆ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಆದರೆ, ಈ ಅಧಿವೇಶನ ಕಲಾಪ ನೇರ ಚಿತ್ರೀಕರಣಕ್ಕೆ ಖಾಸಗಿ ವಾಹಿನಿ ನಿರ್ಬಂಧ ವಿಧಿಸಿ ಸ್ಪೀಕರ್ ಆದೇಶ ನೀಡಿದ್ದಾರೆ. ಸಂಸತ್ ಮಾದರಿಯಲ್ಲಿ ಅಧಿವೇಶನದ ಚಿತ್ರೀಕರಣಕ್ಕೆ ನಿಷೇಧ ವಿಧಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ.
ಸಂಸತ್ ಅಧಿವೇಶನ ಚಿತ್ರೀಕರಣಕ್ಕೆ ಕೇವಲ ಸರಕಾರಿ ಸ್ವಾಮ್ಯದ ದೂರದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹಾಗೂ ಇವರಿಂದ ಖಾಸಗಿ ವಾಹಿನಿಯವರು ಪಡೆದುಕೊಳ್ಳಬಹುದಾಗಿದೆ. ಇದೇ ಮಾದರಿ ಇದೀಗ ರಾಜ್ಯದಲ್ಲಿ ಅನುಕರಣೆಯಾಗುತ್ತಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಈ ಆದೇಶವನ್ನು ಸ್ಪೀಕರ್ ಹೊರಡಿಸಿದ್ದಾರೆ. ಆ ಬಗ್ಗೆ ನಮಗೆ ಯಾವುದೇ ಅಧಿಕಾರವಿಲ್ಲ ಎಂದಿದ್ದಾರೆ.