ಮಂಡ್ಯ, ಅ 09 (DaijiworldNews/SM): ಬುಧವಾರದಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಸದೆ ಸುಮಲತಾ ಭಾಗವಹಿಸಿ ಬಿಜೆಪಿ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದರು. ಇನ್ನು ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ ನಾನು ಮತ್ತು ನನ್ನ ಮಗ ವಿದೇಶ ಪ್ರಯಾಣಕ್ಕೆ ಹೋಗಿದ್ದೇವೆ ಎಂದು ಕೆಲವರುಆರೋಪಿಸಿದ್ದರು. ಆದರೆ ಅವರೇ ಫಾರಿನ್ ಟೂರಿಗೆ ಹೋಗಿದ್ದು ಎಂಬುವುದು ಎಲ್ಲರಿಗೂ ತಿಳಿದಿದೆ. ಸಾಲದ್ದಕ್ಕೆ ಫೋಟೋ ಸಾಕ್ಷಿ ಕೂಡ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧಿಸಿ ಗೆಲುವು ದಾಖಲಿಸಿಕೊಂಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಈ ಕ್ಷೇತ್ರ ಇಡೀ ದೇಶದ ಗಮನವನ್ನೂ ಸೆಳೆದಿತ್ತು.
ಬಳಿಕ ಸುಮಲತಾ ಅವರ ವಿರುದ್ಧ ಮೈತ್ರಿ ಪಕ್ಷಗಳ ನಾಯಕರು ಹಿಗ್ಗಾಮುಗ್ಗಾ ಮಾತಿನ ಬಾಣ ಬಿಟ್ಟಿದ್ದರು. ಅಲ್ಲದೆ ಮತದಾನ ನಡೆದ ಬಳಿಕ ಯಾರು ಗೆಲ್ಲ ಬಹುದೆನ್ನುವ ಬಗ್ಗೆ ಪ್ರತಿನಿತ್ಯ ನಿರಂಟರ ಚರ್ಚೆಯಾಗುತ್ತಿತ್ತು. ಈ ನಡುವೆ ತಾಯಿ ಮಗ ವಿದೇಶ ತೆರಳಿದ್ದಾರೆ. ಸೋಲಿನ ಭಯದಿಂದ ಪಲಾಯನ ಮಾಡಿದ್ದಾರೆ ಎನ್ನುವ ರೀತಿಯಲ್ಲೇ ಹೆಚ್ ಡಿಕೆ ಟೀಕಿಸಿದ್ದರು. ಆದರೆ, ಚುನಾವಣಾ ಫಲಿತಾಂಶ ಉಲ್ಟಾ ಹೊಡೆದಿತ್ತು.
ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ, 'ನಾನು ಎಲ್ಲಿಯೂ ಹೋಗಿಲ್ಲ. ಹಳೇ ಫ್ಲೈಟ್ ಟಿಕೆಟ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ, ನಾನು ವಿದೇಶಕ್ಕೆ ತೆರಳಿದ್ದೇನೆ ಎನ್ನಲಾಗುತ್ತಿದೆ. ನಾನು ಭಾರತದಲ್ಲೇ, ಮಂಡ್ಯದಲ್ಲೇ ಇದ್ದೇನೆ. ನನಗೆ ಫಲಿತಾಂಶದ ಮೇಲೆ ಭಯವಿಲ್ಲ. ಗೆಲ್ಲುವ ವಿಶ್ವಾಸವಿದೆ ಎಂದಿದ್ದರು. ಬಳಿಕ ಆ ಮಾತು ನಿಜವಾಗಿತ್ತು.
ಇನ್ನು ಈ ನಡುವೆ ಸಂಸದೆ ಸುಮಲತಾ ಇಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದರು. ಸುಮಲತಾ ಅವರು ಬಿಜೆಪಿ ಸೇರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನು ಬಿಜೆಪಿ ಸೇರುವುದಾದರೆ ಖಂಡಿತ ಮೊದಲು ನಿಮಗೇ ತಿಳಿಸುತ್ತೇನೆ. ಸದ್ಯಕ್ಕೆ ನಾನು ಇಲ್ಲಿಗೆ ಬಂದಿರುವುದು ಬಿಜೆಪಿ ಮುಖಂಡರಿಗೆ, ಕಾರ್ಯಕರ್ತರಿಗೆ, ಸದಸ್ಯರಿಗೆ ಕೃತಜ್ಞತೆ ಅರ್ಪಿಸುವುದಕ್ಕೆ. ಬಿಜೆಪಿ ನಾಯಕರು, ಕಾರ್ಯಕರ್ತರುನನಗೆ ಸಾಕಷ್ಟು ಸಹಾಯ ಮಾಡಿ, ಬೆಂಬಲಕ್ಕೆ ನಿಂತಿದ್ದರು. ನನ್ನ ಗೆಲುವಿನಲ್ಲಿ ಬಿಜೆಪಿ ಮುಖಂಡರ ಪಾಲು ಕೂಡ ಇದೆ. ಆದ್ದರಿಂದ ಅವರಿಗೂ ಕೃತಜ್ಞತೆ ಅರ್ಪಿಸುವುದಕ್ಕೆ ಈ ಸಭೆಗೆ ಬಂದಿದ್ದೇನೆ ಎದು ಸುಮಲತಾ ಹೇಳಿದರು.