ನವದೆಹಲಿ, ಅ.10(Daijiworld News/SS): ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಹೇಳಿದರು.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಶ್ಮೀರ ವಿಚಾರವಾಗಿ ಭಾರತ ಎಂದೂ ತನ್ನ ನಿಲುವು ಬದಲಿಸಿಲ್ಲ. ಬದಲಿಸುವುದೂ ಇಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇತರೆ ದೇಶಗಳು ಮಧ್ಯ ಪ್ರವೇಶ ಮಾಡುವ ಅಗತ್ಯವಿಲ್ಲ. ಈ ಬಗ್ಗೆ ಚೀನಾಗೂ ಅರಿವಿದೆ ಎಂದು ಪರೋಕ್ಷ ಸೂಚನೆ ನೀಡಿದ್ದಾರೆ.
ಕಾಶ್ಮೀರ ವಿಚಾರವಾಗಿ ಕ್ಸಿ ಜಿನ್ ಪಿಂಗ್ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚರ್ಚೆ ನಡೆಸಿದ್ದರೂ, ಆ ಚರ್ಚೆಗೂ ಇದು ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತ ಪ್ರವಾಸಕ್ಕೂ ಮುನ್ನವೇ ಕೇಂದ್ರ ವಿದೇಶಾಂಗ ಇಲಾಖೆ ಚೀನಾ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದು, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪುನರುಚ್ಛರಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಕಾಶ್ಮೀರ ವಿಚಾರ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಈ ಕುರಿತಂತೆ ಭಾರತದ ವಿರುದ್ಧ ವಾಗ್ದಾಳಿ ನಡೆಸಿರುವ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುತ್ತಿದೆ.